ಮೈಸೂರು: ಮೈಸೂರಿನ ಶ್ರೀ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಜಯನಗರದ ರಾಮ ಮಂದಿರದಲ್ಲಿ ಅತ್ಯಂತ ವೈಭವಯುತವಾಗಿ ದತ್ತ ಜಯಂತಿಯನ್ನು ಆಚರಿಸಲಾಯಿತು.
ಪರಮ ಪೂಜ್ಯ ಶ್ರೀ ವೆಂಕಟಾಚಲ ಅವಧೂತ ಗುರು ಮಹಾರಾಜರ ದಿವ್ಯ ಸಾನಿಧ್ಯ ಮತ್ತು ಪರಮ ಪೂಜ್ಯ ಶ್ರೀ ಅರ್ಜುನ ಅವಧೂತ ಗುರು ಮಹಾರಾಜರ ಉಪಸ್ಥಿತಿಯಲ್ಲಿ ನಡೆದ ಈ ಭಕ್ತಿ ಪ್ರಧಾನ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಮುಂಜಾನೆ 6.30ಕ್ಕೆ ಕಾಕಡಾರತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ಭಕ್ತಾಧಿಗಳಿಂದ ದತ್ತರಿಗೆ ಅಭಿಷೇಕ ಮಾಡಿಸಲಾಯಿತು. ನೆರೆದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಅಭಿಷೇಕ ಮಾಡಿ ಪುನೀತರಾದರು. ಗುರು ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು.
ನಂತರ ಲೋಕ ಕಲ್ಯಾಣಾರ್ಥವಾಗಿ ಹೋಮ ನಡೆಯಿತು. ಶ್ರೀ ದತ್ತಾತ್ರೇಯ ಹೋಮ, ಶ್ರೀ ದಕ್ಷಿಣಾಮೂರ್ತಿ ಹೋಮ, ಶ್ರೀ ವೆಂಕಟಾಚಲ ಹೋಮ ನಡೆಯಿತು. ಭಕ್ತರು ಸಂಕಲ್ಪ ಮಾಡಿಕೊಂಡು ತಮ್ಮ ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಅರ್ಜುನ ಅವಧೂತ ಮಹಾರಾಜರು ಪೂರ್ಣಾಹುತಿ ನೆರವೇರಿಸಿದರು.
ಸುಮಂಗಲೆಯರು, ದಂಪತಿಗಳು, ಕಿಶೋರ-ಕಿಶೋರಿಯರಿಗೆ ಗುರುಗಳು ಪಾದಪೂಜೆ ಮಾಡುವ ಮೂಲಕ ಅವರಲ್ಲಿ ಭಗವಂತನನ್ನು ಕಂಡರು. ಅಕ್ಷತೆ ಮೂಲಕ ಆಶೀರ್ವಾದ ಮಾಡಿದರಲ್ಲದೆ, ಅವರುಗಳ ಪಾದಕಮಲಗಳಿಗೆ ನಮಸ್ಕರಿಸುವ ಮೂಲಕ ಆಶೀರ್ವಾದ ಪಡೆದರು.
ಗುರು ಪಾದುಕಾ ಸ್ತೋತ್ರ ಪಾರಾಯಣದ ನಂತರ ಇಡೀ ದಿನ ಭಜನೆ, ದೇವರನಾಮ, ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು. ನಂತರ ಗುರುಗಳು ಮಧುಕರಿ ಭಿಕ್ಷಾವಂದನೆ ಸ್ವೀಕರಿಸಿ, ಪ್ರತಿಯೊಬ್ಬರಿಗೂ ಫಲ-ಮಂತ್ರಾಕ್ಷತೆ ನೀಡಿ ಆಶೀರ್ವಾದ ಮಾಡಿದರು.
ಮೈಸೂರು, ಬೆಂಗಳೂರು, ಬೆಳಗಾವಿ, ತುಮಕೂರು, ಧಾರವಾಡ ಸೇರಿದಂತೆ ರಾಜ್ಯದ ನಾನಾ ಮೂಲಗಳಿಂದ ಭಕ್ತರು ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾದರು.
ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಫಣೀಶ್, ಹಿರಿಯ ಮುಖಂಡ ಬಿ.ಎಲ್. ಶಂಕರ್, ಬಿಜೆಪಿ ಮುಖಂಡರಾದ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ಸೇರಿದಂತೆ ಗಣ್ಯಾತಿ ಗಣ್ಯರು ಪಾಲ್ಗೊಂಡು ದತ್ತರ ಆಶೀರ್ವಾದ ಪಡೆದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.