ಮೈಸೂರು: ತನ್ನ ಕುಡಿತದ ಚಟವನ್ನು ಬಿಡಿಸಲು ಪ್ರಯತ್ನಿಸುತ್ತಿದ್ದ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಮೈಸೂರಿನ ಕ್ಯಾತಮಾರನಹಳ್ಳಿಯ ಎ.ಕೆ ಕಾಲೋನಿಯಲ್ಲಿ ನಡೆದಿದೆ.
ಸಂಧ್ಯಾ (25) ತನ್ನ ಗಂಡ ಕಿರಣ್ (27)ನಿಂದ ಕೊಲೆಯಾದ ದುರ್ದೈವಿ. ಈ ಜೋಡಿ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ಮಗುವಿದೆ. ಕಿರಣ್ ಮದುವೆಯಾಗಿದ್ದಾಗಿನಿಂದಲೂ ಕುಡಿತದ ಚಟವನ್ನು ಅಂಟಿಸಿಕೊoಡಿದ್ದ.
ಇದರಿಂದ ಬೇಸೆತ್ತ ಸಂಧ್ಯಾ ಆತನ ಕುಡಿತದ ಚಟವನ್ನು ಬಿಡಿಸಲು ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಿದ್ದಳು. ಮೂರು ತಿಂಗಳಿನಿoದ ಪುನರ್ವಸತಿ ಕೇಂದ್ರದಲ್ಲಿದ್ದು ಬಂದಿದ್ದ. ಕಿರಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಅಲ್ಲದೇ ಮತ್ತೆ ಕುಡಿತದ ಚಟ ಅಂಟಿಸಿಕೊoಡಿದ್ದ.
ಈ ವಿಚಾರವಾಗಿ ಗಂಡ-ಹೆoಡತಿ ನಡುವೆ ಜಗಳ ನಡೆದಿದೆ. ಅದು ವಿಕೋಪಕ್ಕೆ ತೆರಳಿದಾಗ ಕುಪಿತನಾದ ಕಿರಣ್ ಪತ್ನಿ ಸಂಧ್ಯಾ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಪತಿ ಕಿರಣ್ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಉದಯಗಿರಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.