ಮೈಸೂರು : ಪ್ರೇಮಿಗಳ ದಿನಾಚರಣೆಯನ್ನು ಪ್ರೇಮಿಗಳು ಹಲವು ರೀತಿಯಲ್ಲಿ ಆಚರಣೆ ಮಾಡಿದರೂ ಮೈಸೂರಿನಲ್ಲಿ ಮಾತ್ರ ಪ್ರೇಮಿಗಳು ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ.
ವಿಶ್ವ ಪ್ರೇಮಿಗಳ ದಿನಾಚರಣೆ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ರಕ್ತಸಂಬಂಧಿ ಬಳಗವು ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಸುಮಾರು 15ಕ್ಕೂ ಹೆಚ್ಚು ಪ್ರೇಮಿಗಳ ಜೋಡಿ ಭಾಗವಹಿಸಿ ರಕ್ತದಾನ ಮಾಡಿ ಗಮನಸೆಳೆದರು.
ಈ ವೇಳೆ ಪ್ರೇಮಿಗಳಲ್ಲಿ ಒಬ್ಬರಾದ ವರಲಕ್ಷ್ಮಿ ಅಜಯ್ ಮಾತನಾಡಿ ನಮ್ಮ ರಕ್ತಸಂಬಂಧಿ ತಂಡದಲ್ಲಿ ನಾವೆಲ್ಲರೂ ಪ್ರೀತಿಸಿ ಪೋಷಕರನ್ನು ಒಪ್ಪಿಸಿ ಮದುವೆಯಾದವರು. ಕಳೆದ ಆರೇಳು ವರ್ಷಗಳಿಂದ ಪ್ರೇಮಿಗಳ ದಿನಾಚರಣೆಯನ್ನು ಸಡಗರದಿಂದ ಆಚರಿಸುತ್ತಿದ್ದೆವು. ಆದರೆ 2019ರಲ್ಲಿ ಪ್ರೇಮಿಗಳ ದಿನಾಚರಣೆಯಂದೇ ಪುಲ್ವಾಮದಲ್ಲಿ ನಮ್ಮ ಭಾರತೀಯ ಸೈನಿಕರ ಹತ್ಯೆ ನಡೆದದ್ದು ಇಡೀ ದೇಶ ದುಃಖದ ಮಡಿಲಲ್ಲಿತ್ತು. ನಮಗೂ ಸಹ ಬೇಸರ ತರಿಸಿತು, ಅದರಿಂದ ಮನನೊಂದು ನಮ್ಮ ರಕ್ತಸಂಬಂಧಿ ತಂಡ ಪ್ರತಿವರ್ಷ ಪ್ರೇಮಿಗಳ ದಿನಾಚರಣೆಯನ್ನು ಸಂಭ್ರಮಿಸದೇ ಸಾಮಾಜಿಕ ಕಳಕಳಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ ಕೋವಿಡ್ ಸಂದರ್ಭದಲ್ಲಿ ಅನ್ನದಾಸೋಹ ರಕ್ತದಾನ ಸೇವಾ ಕಾರ್ಯಕ್ರಮ ಆಚರಿಸಲು ಮಂದಾಗಿದ್ದೇವೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸರಸ್ವತಿ ಪ್ರಸಾದ್ ಮಾತನಾಡಿ ಅಪಘಾತ, ಹೆರಿಗೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾಗಿ ರಕ್ತದ ಶೇಖರಣೆ ಕುಸಿಯದ ಹಾಗೆ ಕಾಪಾಡಿಕೊಳ್ಳಬೇಕು ಎಂದರೆ ರಕ್ತದಾನ ಶಿಬಿರ ಆಯೋಜಿಸುವಲ್ಲಿ ಯುವಕರು ಹೆಚ್ಚಾಗಿ ಪ್ರೋತ್ಸಾಹಿಸಬೇಕು. ಒಬ್ಬರ ರಕ್ತದಾನದಿಂದ ಏಕಕಾಲಕ್ಕೆ ಮೂವರ ರೋಗಿಗಳ ಜೀವ ಉಳಿಸಬಹುದು. ಆರೋಗ್ಯ ಇಲಾಖೆ ರಕ್ತದಾನದ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ರಕ್ತದಾನ ಅರಿವು ಮೂಡಿಸುವ ನಾಮಫಲಕಗಳನ್ನು ಅಳವಡಿಸಲು ಮುಂದಾಗಬೇಕು ಎಂದರು.
ರಕ್ತದಾನ ಶಿಬಿರದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹಿಂದುಳಿದ ವರ್ಗಗಳ ಮುಖಂಡ ಸೂರಜ್, ರಕ್ತಸಂಬಂಧಿ ಬಳಗದ ಶೀಲಾ ರವಿ, ಸೌಮ್ಯ ನಾಗೇಂದ್ರ, ಸುಮನ ಮಾದೇಶ್, ವರಲಕ್ಷ್ಮಿ ಅಜಯ್, ಮಧುರ ಶಿವು, ಸರಸ್ವತಿ ಮಹಾಲಿಂಗ, ರಶ್ಮಿ ಧನರಾಜ್, ಸಿಂಧೂ ದೇವರಾಜ್, ಕೋಕಿಲ ಶರತ್, ಗಗನ ಚಂದ್ರು ಮೊದಲಾದವರು ಪಾಲ್ಗೊಂಡು ರಕ್ತದಾನ ಮಾಡಿದರು.