ಮೈಸೂರು: ಮೈಸೂರಿನ ರಂಗಯಾನ ಟ್ರಸ್ಟ್ ಮತ್ತು ಬೆಂಗಳೂರಿನ ಕರ್ನಾಟಕ ನಾಟಕ ಅಕಾಡಮಿಯು ನೂತನವಾಗಿ ಗ್ರಾಮರಂಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ವಿನೂತನ ಕಾರ್ಯಕ್ರಮವಾಗಿದೆ.
ಮೈಸೂರಿನ ರಂಗಯಾನ ಟ್ರಸ್ಟ್ ಕಳೆದ ಎಂಟು ವರ್ಷಗಳಿಂದ ವಿಭಿನ್ನವಾದ ರಂಗಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು ಭಾರತದಾದ್ಯಂತ ರಂಗಪ್ರದರ್ಶಗಳನ್ನು ನೀಡುತ್ತಾ ಹೊಸಹೊಸ ಆಯಾಮದೆಡೆಗೆ ಹೆಜ್ಜೆಯಿಡುತ್ತಿರುವುದು ವಿಶೇಷವಾಗಿದೆ. ಇದೀಗ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಎರೆಡು ದಿನದ ನಾಟಕೋತ್ಸವವನ್ನು ಗ್ರಾಮಮಟ್ಟದಲ್ಲಿ ಫೆ.19 ಮತ್ತು 20ರಂದು ಬೋಗಾದಿ ರಸ್ತೆಯಲ್ಲಿರುವ ಕೆ.ಹೆಮ್ಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ರಂಗಭೂಮಿ ಎಲ್ಲೆಡೆ ಪಸರಿಸಬೇಕು ಎಂಬ ಉದ್ದೇಶದಿಂದ ಆಧುನಿಕ ರಂಗಭೂಮಿಯ ಸವಿಯನ್ನು ಗ್ರಾಮ ಮಟ್ಟದಲ್ಲಿ ಪರಿಚಯಿಸಲು ಈ ರಂಗೋತ್ಸವವನ್ನು ಗ್ರಾಮದಲ್ಲಿಯೇ ಆಯೋಜಿಸುತ್ತಿದ್ದು,ಬಹುಮುಖ್ಯವಾಗಿ ಎಲ್ಲಾ ವಯಸ್ಸಿನ ಕಲಾವಿದರನ್ನು ಗಮನದಲ್ಲಿರಿಸಿಕೊಂಡು ಮಕ್ಕಳ ನಾಟಕ, ಯುವಕರ ನಾಟಕ ಮತ್ತು ಹಿರಿಯ ಕಲಾವಿದರ ನಾಟಕಗಳನ್ನು ವೇದಿಕೆಗೆ ತರಲಾಗುತ್ತಿದೆ.
ಮಕ್ಕಳ ಮತ್ತು ಯುವಕರ ಆಧುನಿಕ ರಂಗಭೂಮಿ ಮತ್ತು ಹಿರಿಯ ಕಲಾವಿದರ ಪೌರಾಣಿಕ ವೃತ್ತಿ ರಂಗಭೂಮಿಯ ನಾಟಕಗಳು ಈ ನಾಟಕೋತ್ಸವದಲ್ಲಿ ಮಹಾಸಮಾಗಮವಾಗುತ್ತಿರುವುದು ಗ್ರಾಮರಂಗೋತ್ಸವ ವಿಶೇಷತೆಯಾಗಿದೆ.