ಪಿರಿಯಾಪಟ್ಟಣ: ಪತ್ನಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದ ಪತಿಯನ್ನು ಬಂಧಿಸುವಲ್ಲಿ ಬೆಟ್ಟದಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಬೆಟ್ಟದಪುರ ಸಮೀಪದ ಶ್ಯಾನುಬೋಗನಹಳ್ಳಿ ಗ್ರಾಮದಲ್ಲಿ 2020 ನವೆಂಬರ್ 12 ರಂದು ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವದ ಮೇಲಿದ್ದ ಬಟ್ಟೆಯನ್ನು ನೋಡಿ ಮಲ್ಲಿಗೆ (35) ಎಂದು ಅವರ ತಾಯಿ ಗೌರಿ ಗುರುತಿಸಿ ನನ್ನ ಮಗಳನ್ನು ಯಾರೋ ಯಾವುದೋ ಉದ್ದೇಶಕ್ಕಾಗಿ ಆಯುಧದಿಂದ ಹೊಡೆದು ಕೊಲೆ ಮಾಡಿ ಜಮೀನಿನ ಬಳಿ ಹಾಕಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು.
ಅಂದಿನಿಂದ ಕೊಲೆಯಾಗಿದ್ದ ಮಹಿಳೆಯ ಪತಿ ಸುರೇಶ್ ಸಹ ನಾಪತ್ತೆಯಾಗಿದ್ದರು. ತನಿಖೆ ಕೈಗೊಂಡ ಬೆಟ್ಟದಪುರ ಪೊಲೀಸರು ತಲೆಮರೆಸಿಕೊಂಡಿದ್ದ ಸುರೇಶನನ್ನು ಪತ್ತೆ ಮಾಡಿ ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಸಮಯ ಮಾಡಿರುವ ತಪ್ಪನ್ನು ಆತ ಒಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ಆರೋಪಿ ಬಂಧನ ಕಾರ್ಯಾಚರಣೆಯಲ್ಲಿ ಪಿಎಸ್ಐ ಪ್ರಕಾಶ್ ಎಂ ಯತ್ತಿನಮನಿ, ಎಎಸ್ಐ ಸೋಮಶೇಖರ, ಸಿಬ್ಬಂದಿ ರಮೇಶ್, ಮಧು, ದಿಲೀಪ್, ಗಣೇಶ್ , ಮಂಜು, ಭಾಸ್ಕರ ಇದ್ದರು.