ಹುಣಸೂರು: ನಾಗರಹೊಳೆ ಉದ್ಯಾನವನದಂಚಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣದ ಸಲುವಾಗಿ ರೈಲ್ವೆಹಳಿ ತಡೆಗೋಡೆ ನಿರ್ಮಾಣಕ್ಕೆ ದಾಸ್ತಾನು ಮಾಡಿದ್ದ ಸಾಮಗ್ರಿಗಳನ್ನು ಬೇರೆಡೆ ಸಾಗಿಸಲು ಬಂದಿದ್ದ ವಾಹನಗಳನ್ನು ಹನಗೋಡು ಹೋಬಳಿಯ ಉದ್ಯಾನದಂಚಿನ ರೈತರು, ಗ್ರಾಮಸ್ಥರು, ರೈತ ಮಹಿಳೆಯರು ತಡೆಯೊಡ್ಡಿ ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈಗಾಗಲೇ ಕಾಡಿನಿಂದ ನಾಡಿನತ್ತ ಕಾಡಾನೆಗಳು ಆಗಮಿಸುತ್ತಿದ್ದು, ಕಾಡಂಚಿನ ರೈತರು ತಾವು ಮಾಡಿದ ಕೃಷಿಫಸಲನ್ನು ಕಳೆದುಕೊಳ್ಳುವಂತಾಗಿದೆ. ಹೀಗಾಗಿ ಅರಣ್ಯದಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಗೋಡೆ ನಿರ್ಮಾಣ ಮಾಡುವಂತೆ ಈ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬರಲಾಗುತ್ತಿದೆ.
ಈ ನಡುವೆ ಅರಣ್ಯ ಇಲಾಖೆ ರೈಲ್ವೆ ಹಳಿಯನ್ನು ಬಳಸಿ ಅರಣ್ಯದಂಚಿನಲ್ಲಿ ತಡೆಗೋಡೆ ನಿರ್ಮಿಸುವ ಸಲುವಾಗಿ ಸಾಮಗ್ರಿಗಳನ್ನು ತಂದು ದಾಸ್ತಾನು ಮಾಡಿದ್ದರು ಇದು ಈ ವ್ಯಾಪ್ತಿಯ ಜನರಲ್ಲಿ ತುಸು ನೆಮ್ಮದಿ ತಂದಿತ್ತು ಆದರೆ ಇದೀಗ ಆ ಸಾಮಗ್ರಿಗಳನ್ನು ಬೇರೆಡೆಗೆ ಸಾಗಾಟಕ್ಕೆ ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿ ಉದ್ಯಾನದಂಚಿನ ಹುಣಸೂರು ವನ್ಯಜೀವಿವಲಯ ವ್ಯಾಪ್ತಿಯ ಕಿಕ್ಕೇರಿಕಟ್ಟೆಯಲ್ಲಿ ರೈಲ್ವೆ ಕಂಬಿಗಳ ಮೇಲೆ ಕುಳಿತು ಪ್ರತಿಭಟಿಸಿದ ನೂರಾರು ರೈತರು ಅರಣ್ಯಇಲಾಖೆ ವಿರುದ್ದ ಧಿಕ್ಕಾರ ಮೊಳಗಿಸಿದರು. ಈ ವೇಳೆ ಗ್ರಾ.ಪಂ. ಸದಸ್ಯರಾದ ರಂಗಣ್ಣ, ಮಹೇಶ್ ಮತ್ತಿತರ ರೈತರು ಮಾತನಾಡಿ ಸರಕಾರ, ಶಾಸಕರ ಮೇಲೆ ಒತ್ತಡ ಹಾಕಿದ ಪರಿಣಾಮ ರೈಲ್ವೆಹಳಿ ಬೇಲಿ ನಿರ್ಮಾಣಕ್ಕೆ ಮುಂದಾಗಿದ್ದು, ಇದೀಗ ಅರಣ್ಯಇಲಾಖೆಯು ರೋಪ್‌ವೇ ಕಂಟ್ರ್ಯಾಕ್ಟರನ ಮರ್ಜಿಗೆ ಒಳಗಾಗಿ ಇಲ್ಲಿಂದ ರೈಲ್ವೆಹಳಿಯ ಕಬ್ಬಿಣವನ್ನು ಬೇರೆಡೆಗೆ ಸ್ಥಳಾಂತರಿಸಿರುವುದು ಏಕೆಂದು ಪ್ರಶ್ನಿಸಿ, ಇಲ್ಲಿಯೇ ರೈಲ್ವೆ ಹಳಿ ತಡೆಗೋಡೆ ನಿರ್ಮಾಣವಾಗಲಿ ಎಂದು ಪಟ್ಟುಹಿಡಿದರು.
ಈ ವೇಳೆ ಸ್ಥಳದಲ್ಲಿದ್ದ ಆರ್.ಎಫ್.ಓ. ಹನುಮಂತರಾಜು ಈ ಭಾಗವು ಜೌಗು ಪ್ರದೇಶವಾಗಿದ್ದು, ರೈಲ್ವೇಹಳಿ ತಡೆಗೋಡೆ ನಿರ್ಮಾಣ ಕಷ್ಟವಾಗಿದೆ ಎಂದು ಸಮಜಾಯಿಷಿ ನೀಡಿದರೂ ಒಪ್ಪದ ರೈತರು ಇಲ್ಲಿಗೆ ಮಂಜೂರಾಗಿರುವಂತೆ ತಡೆಗೋಡೆಯೇ ನಿರ್ಮಾಣವಾಗಲೆಂದು ಪಟ್ಟು ಹಿಡಿದಿದ್ದರಿಂದ ವಾಹನಗಳು ಅನಿವಾರ್ಯವಾಗಿ ವಾಪಾಸ್ ಹೋದವು.
ಮಾಹಿತಿ ಪಡೆದ ಶಾಸಕ ಮಂಜುನಾಥರು ವೀರನಹೊಸಳ್ಳಿ ಬಳಿ ನಿರ್ಮಿಸುತ್ತಿರುವ ರೂಪ್‌ವೇ ಕಾಮಗಾರಿಯನ್ನು ವೀಕ್ಷಿಸಿ ತೀರ್ಮಾನ ತೆಗೆದು ಕೊಳ್ಳುವಂತೆ ಅವರೇ ರೈತರಿಗೆ ವಾಹನ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲಿಗೆ ತೆರಳಿ ರೂಪ್‌ವೇ ಬೇಲಿಯನ್ನು ವೀಕ್ಷಿಸಿ, ಇದಕ್ಕಿಂತ ನಮಗೆ ರೈಲ್ವೆ ಹಳಿ ತಡೆಗೋಡೆಯೇ ಬೇಕೆಂದು ಪಟ್ಟು ಹಿಡಿದರು.
ಅರಣ್ಯಇಲಾಖೆ ಅಧಿಕಾರಿಗಳು ಇಲ್ಲಿ ತಡೆಗೋಡೆ ಉಳಿಯುವುದು ಕಷ್ಟವಾಗಿದ್ದು, ರೋಪ್ ವೇ ಇಲ್ಲಿಗೆ ಸೂಕ್ತವೆಂದು ಮನವರಿಕೆ ಕೊಟ್ಟರೂ ರೈತರು ಒಪ್ಪುತ್ತಿಲ್ಲ. ಮತ್ತೆ ಶುಕ್ರವಾರದಂದು ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸುವ ವಿಷಯ ತಿಳಿಯುತ್ತಿದ್ದಂತೆಯೇ ರೈತರು ಅಪಾರ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿ ರೈಲ್ವೆ ಕಂಬಿಗಳ ಮೇಲೆ ಕುಳಿತು ಪ್ರತಿಭಟಿಸುತ್ತಿದ್ದಂತೆಯೇ ವಾಹನಗಳು ವಾಪಸ್ ತೆರಳಿದವು. ಕೆಲ ಅರಣ್ಯ ಸಿಬ್ಬಂದಿ ಹೊರತುಪಡಿಸಿ ಅಧಿಕಾರಿಗಳ್ಯಾರು ಬಂದಿರಲಿಲ್ಲ. ರೈತರು ಯಾವುದೇ ಕಾರಣಕ್ಕೂ ರೂಪ್ ವೇ ಬೇಲಿ ಅಳವಡಿಸಲು ಬಿಡೋದಿಲ್ಲವೆಂದು ಪಟ್ಟು ಹಿಡಿದಿದ್ದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿಂದ ಸಾಮಾಗ್ರಿ ಬೇರೆಡೆಗೆ ಸಾಗಿಸಲು ಕಾರ್ಯ ತಂತ್ರ ರೂಪಿಸುತ್ತಿರುವುದು ಕಂಡು ಬಂದಿದೆ.
ಈ ನಡುವೆ ಉಡುವೇಪುರದಿಂದ ಉತ್ತೇನಹಳ್ಳಿವರೆಗೆ ಕಪ್ಪುಮಣ್ಣಾಗಿದ್ದು ಕಾಮಗಾರಿ ನಡೆಸಲು ಸಾಧ್ಯವಿಲ್ಲ, ಆದ್ದರಿಂದ ಹೊಸ ತಂತ್ರಜ್ಞಾನದಿಂದ ಕೂಡಿದ ರೋಪ್‌ವೇ ಬೇಲಿಯನ್ನು ನಿರ್ಮಾಣ ಮಾಡಲಾಗುವುದು. ರೈತರು ಅರ್ಥ ಮಾಡಿಕೊಳ್ಳಬೇಕೆಂದು ಎಸಿಎಫ್ ಸತೀಶ್ ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ತಾ.ಪಂ.ಮಾಜಿಸದಸ್ಯ ಗಣಪತಿ, ಮುಖಂಡರಾದ ಪಲ್ಗುಣ, ಲಕ್ಕಪ್ಪ, ಪುಟ್ಟರಾಜು, ಮಹದೇವ್ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ರೈತರು ಭಾಗವಹಿಸಿದ್ದರು.