ಮೈಸೂರು: ಮಳೆಗಾಗಿ ಪ್ರಾರ್ಥಿಸಿ ಕಪ್ಪೆ ಮದುವೆ ಮಾಡಿಸಿದ ನಿವಾಸಿಗಳು ಸಂಗ್ರಹಿಸಿದ ದವಸ-ಧಾನ್ಯ ಹಾಗೂ ಹಣದಿಂದ ಅಡುಗೆ ಮಾಡಿ, ಸವಿದು ಸಂಭ್ರಮಿಸಿದರು.
ಎಚ್.ಡಿ.ಕೋಟೆ, ಸರಗೂರು ತಾಲೂಕಿನಲ್ಲಿ ಕಳೆದೊಂದು ತಿಂಗಳಿಂದ ಮಳೆ ಅಭಾವದ ಹಿನ್ನೆಲೆಯಲ್ಲಿ ಈಗಾಗಲೇ ಬಿತ್ತನೆ ಮಾಡಲಾದ ವಾಣಿಜ್ಯ ಬೆಳೆಗಳಾದ ಹತ್ತಿ, ಮಕ್ಕೆಜೋಳ, ಅವರೆ ಸೇರಿದಂತೆ ಇನ್ನಿತರ ಬೆಳೆಗಳು ಬಿಸಿಲಿನಿಂದ ಬಾಡಿ ಹಾಳಾಗುತ್ತಿದ್ದು ಇದರಿಂದ ಮನನೊಂದ ಯರಹಳ್ಳಿ ಕಾವಲ್‌ನ ಗ್ರಾಮಸ್ಥರು ಕಪ್ಪೆ ಮದುವೆ ಮಾಡಿಸಿ, ಮಳೆರಾಯನಲ್ಲಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಗ್ರಾಮದ ಹೊಸಕೆರೆ ಆವರಣದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿಸಿದ್ದಾರೆ. ನಂತರ ಮೆರವಣಿಗೆ ಮಾಡಿಸಿ, ದವಸ-ಧಾನ್ಯಗಳನ್ನು ಸಂಗ್ರಹಿಸಿದ್ದಾರೆ. ನಂತರ ಕಪ್ಪೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಬಿಟ್ಟಿದ್ದಾರೆ. ಸಂಗ್ರಹವಾದ ಆಹಾರ ಪದಾರ್ಥಗಳಿಂದ ಅಡುಗೆ ಮಾಡಿಕೊಂಡು ಮದುವೆ ಊಟೋಪಚಾರ ಮಾಡಿದ್ದಾರೆ. ಇದಲ್ಲದೆ ಕೆರೆಯ ಬಳಿಗೆ ಬಂದವರಿಗೆಲ್ಲರಿಗೂ ಮದುವೆ ಊಟವನ್ನು ಬಡಿಸಿದ್ದಾರೆ.
ಕಪ್ಪೆ ಮದುವೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಭ್ರಮ ಮನೆ ಮಾಡಿತ್ತು. ಮಳೆ ಬಾರದೆ ಬೆಳೆಗಳು ಹಾಳಾಗುತ್ತಿವೆ ಎಂಬ ಕೊರಗು ಒಂದೆಡೆಯಾದರೆ ಕಪ್ಪೆ ಮದುವೆ ಮಾಡಿದರೆ ಖಂಡಿತಾ ಮಳೆ ಬರಲಿದೆ ಎಂಬ ನಂಬಿಕೆಯಲ್ಲಿ ಜನರು ಸಂಭ್ರಮಪಟ್ಟರು. ಗ್ರಾಮದ ಯುವಕರು, ಮಹಿಳೆಯರು, ಮುಖಂಡರು ಇದ್ದರು.