ಮೈಸೂರು: ಎನ್. ಆರ್. ಮೊಹಲ್ಲಾದಲ್ಲಿರುವ ಮೆಸ್ಕೋ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಮೀಪದ ಬಡಾಮಕಾನ್ ನ ಸ್ಲಂ ಪ್ರದೇಶದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಜಾಥಾ ನಡೆಸಿ ಉಮರ್ ಶಾ ಮಸೀದಿಯ ಆವರಣದಲ್ಲಿ ಬಾಲಕಾರ್ಮಿಕ ಪದ್ಧತಿ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಕಿರು ಬೀದಿ ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಕ್ಕಳಹಕ್ಕುಗಳ ಹೋರಾಟಗಾರರು ಮತ್ತು ಅಡ್ವೊಕೇಟ್ ಬಾಬುರಾಜ್ ರವರು ಬಾಲಕಾರ್ಮಿಕ ಪದ್ಧತಿ ಮೊದಲಿನಿಂದಲೂ ನಮ್ಮ ಸುತ್ತಮುತ್ತಲಿನಲ್ಲಿ ನಡೆದುಕೊಂಡು ಬಂದಿರುವ ದೊಡ್ಡ ಸಾಮಾಜಿಕ ಪಿಡುಗು. ಅಲ್ಲದೇ ಮಕ್ಕಳಿಗೆ ದೊರೆತಿರುವ ಸಂವಿಧಾನದ ಹಕ್ಕಿನ ಉಲ್ಲಂಘನೆಯಾಗಿದೆ.
ಮಕ್ಕಳ ಹಕ್ಕುಗಳು ನಮ್ಮ ಔದಾರ್ಯವಲ್ಲ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಮತ್ತು ಅವರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ತಿಳಿ ಹೇಳಿದರು. ಇಂದಿನ ವಿಷಮ ಪರಿಸ್ಥಿತಿಯಲ್ಲಿ ನಾವು ಶಿಕ್ಷಣದ ಮೂಲಕ ಮಾತ್ರ ಮುಂದೆ ಬರಲುಸಾಧ್ಯಎಂದರು.
ಮೆಸ್ಕೋ ಐ.ಟಿ.ಐ ಪ್ರಾಂಶುಪಾಲರಾದ ಎಂ. ಕಲೀಂ ಅಹ್ಮದ್ ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ನಮ್ಮ ದೈನಂದಿನ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ ಹಾಗೂ ಸುತ್ತಲಿನ ಸಮಾಜದ ಪ್ರಮುಖರು ಕೂಡ ಈ ನಿಟ್ಟಿನಲ್ಲಿ ಯೋಚಿಸಬೇಕು. ಬಾಲಕಾರ್ಮಿಕ ಪದ್ಧತಿ ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯದರ್ಶಿ ಪ್ರೊ. ಶಬ್ಬೀರ್ ಮುಸ್ತಪಫಾ ವಹಿಸಿದ್ದರು.