ಮೈಸೂರು: ವಿಕೃತ ಮನಸ್ಸಿನ ಗಂಡನೊಬ್ಬ ಶೀಲ ಶಂಕಿಸಿ ಹೆಂಡತಿಯ ರುಂಡ ಮುಂಡ ಕಡಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪುಟ್ಟಮ್ಮ(40) ಎಂಬಾಕೆ ಗಂಡ ದೇವರಾಜ್ ಎಂಬಾತನಿಂದ ಹತ್ಯೆಗೀಡಾದ ದುರ್ದೈವಿ. ಈಕೆಯ ಗಂಡ ದೇವರಾಜ್ ಗೆ ಕೊಲೆಗೀಡಾಡ ಪುಟ್ಟಮ್ಮ ಎರಡನೇ ಹೆಂಡತಿಯಾಗಿದ್ದಾಳೆ. ಸದಾ ಹೆಂಡತಿಯ ಶೀಲ ಶಂಕಿಸುವ ಜಾಯಮಾನ ಹೊಂದಿದ್ದ ದೇವರಾಜ್ ತನ್ನ ಮೊದಲ ಹೆಂಡತಿಗೂ ಇದೇ ರೀತಿಯ ಹಿಂಸೆ ನೀಡುತ್ತಿದ್ದನು. ಆತನ ಕಿರುಕುಳದಿಂದ ಬೇಸತ್ತು ಮೊದಲ ಹೆಂಡತಿ ದೂರವಾದ ಬಳಿಕ ಪುಟ್ಟಮ್ಮಳನ್ನು ಇಪ್ಪತ್ತೊಂದು ವರ್ಷಗಳ ಹಿಂದೆ ಮದುವೆ ಯಾಗಿದ್ದು, ಇವರಿಗೆ 20 ವರ್ಷದ ಮಗಳಿದ್ದಾಳೆ.
ಈ ಹಿಂದೆ ಈತ ಮೊದಲ ಹೆಂಡತಿ ಹತ್ಯೆಗೆ ಯತ್ನಿಸಿ ಜೈಲುವಾಸ ಅನುಭವಿಸಿ ಬಂದಿದ್ದರೂ ಬುದ್ದಿ ಕಲಿತಿರಲಿಲ್ಲ. ಈ ನಡುವೆ ಎರಡನೇ ಹೆಂಡತಿ ಪುಟ್ಟಮ್ಮಳೊಂದಿಗೆ ಜಗಳ ತೆಗೆಯುತ್ತಿದ್ದ ದೇವರಾಜ್ ವಿಕೋಪಕ್ಕೆ ಹೋಗಿ ಕತ್ತಿಯಿಂದ ಕಡಿದು ಆಕೆಯ ರುಂಡಮುಂಡ ಬೇರೆ ಮಾಡಿ ಪರಾರಿಯಾಗಿದ್ದಾನೆ.
ಮಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ವರುಣಾ ಠಾಣೆ ಪೊಲೀಸರು ಹಂತಕನ ಬಂಧನಕ್ಕಾಗಿ ಕ್ರಮ ಕೈಗೊಂಡಿದ್ದಾರೆ.