ಮೈಸೂರು: ಮಕ್ಕಳಲ್ಲಿ ವಾಚನಾಸಕ್ತಿ ಮೂಡಿಸುವ ಮತ್ತು ಕಲಿಕೆಗೆ ಅನುಕೂಲವಾಗುವಂತೆ ಸಾಮಾನ್ಯವಾಗಿ ಎಲ್ಲ ಶಾಲಾ, ಕಾಲೇಜು ಮತ್ತು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಾಚನಾಲಯಗಳನ್ನು ತೆರೆಯಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಾದ ಪುಸ್ತಕಗಳು ನಿರ್ವಹಣೆಯ ಕೊರತೆಯಿಂದಾಗಿ ಗೆದ್ದಲು ಹಿಡಿದು ಹಾಳಾಗುತ್ತಿರುವ ಘಟನೆ ನಂಜನಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಪ್ರೌಢಶಾಲೆ ವಾಚನಾಲಯದಲ್ಲಿ ಬೆಳಕಿಗೆ ಬಂದಿದೆ.
ಪುಸ್ತಕಗಳು ಜ್ಞಾನದ ಭಂಡಾರವಾಗಿದ್ದು, ಅವುಗಳನ್ನು ಹಾಳಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದರೆ ನಂಜನಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ವಾಚನಾಲಯದತ್ತ ಸಂಬಂಧಿಸಿದವರು ನಿಗಾವಹಿಸಿದ ಮತ್ತು ನಿರ್ಲಕ್ಷ್ಯದ ಕಾರಣದಿಂದಾಗಿ ಹತ್ತು ಹಲವು ಅತ್ಯುಪಯುಕ್ತ ಪುಸ್ತಕಗಳು ಇವತ್ತು ಗೆದ್ದಲು ಹಿಡಿಯುವಂತಾಗಿದೆ.
ಈ ವಾಚಾನಾಲಯದಲ್ಲಿದ್ದ ಪುಸ್ತಕಗಳತ್ತ ಗಮನಹರಿಸದ ಕಾರಣದಿಂದ ಅವು ಗೆದ್ದಲು ಹಿಡಿದು ಹಾಳಾಗಿದ್ದವು. ಇನ್ನು ಈ ಗೆದ್ದಲು ಹಿಡಿದ ಪುಸ್ತಕಗಳನ್ನು ಅಲ್ಲಿಯೇ ಇಟ್ಟುಕೊಂಡರೆ ತೊಂದರೆಯಾಗುತ್ತದೆ. ಜತೆಗೆ ಮೇಲಾಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಗೆದ್ದಲು ಹಿಡಿದ ಪುಸ್ತಕಗಳನ್ನ ಕಸದ ತೊಟ್ಟಿಗೆ ಎಸೆದು ಕೈತೊಳೆದು ಕೊಂಡಿದ್ದಾರೆ.
ಈ ವಾಚನಾಲಯದಲ್ಲಿ 1970 ರ ದಶಕದಿಂದಲೂ ಪುಸ್ತಕಗಳನ್ನ ಸಂಗ್ರಹಿಸಿಕೊಂಡು ಬರಲಾಗಿತ್ತು. ಇಲ್ಲಿ ಸುಮಾರು 20 ಸಾವಿರ ಪುಸ್ತಕಗಳ ಸಂಗ್ರಹವಿತ್ತು ಎನ್ನಲಾಗಿದೆ. ಆದರೆ ಇಂತಹ ಪುಸ್ತಕಗಳನ್ನು ಜತನದಿಂದ ಕಾಪಾಡಿಕೊಳ್ಳಬೇಕಾದವರು ಅವುಗಳನ್ನು ಗೆದ್ದಲು ತಿನ್ನಲು ಬಿಟ್ಟಿದ್ದಲ್ಲದೆ ಅವುಗಳನ್ನು ಕಸದ ತೊಟ್ಟಿಗೆ ಎಸೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದವರು ಈ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.