ಮೈಸೂರು: ಕಾಡಂಚಿನ ಗ್ರಾಮದಲ್ಲಿರುವ ನವಿಲುಗಳನ್ನು ಹಿಡಿದು ಅವುಗಳನ್ನು ಮನೆಯಲ್ಲಿ ತಂದಿಟ್ಟು ಸಾಕುತ್ತಿದ್ದ ಆರೋಪಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿರುವ ಘಟನೆ ಹುಣಸೂರು ತಾಲೂಕಿನ ಹನಗೂಡು ಹೋಬಳಿಯ ಕಾಮಗೌಡನ ಹಳ್ಳಿಯಲ್ಲಿ ನಡೆದಿದೆ.
ಕಾಮಗೌಡನ ಹಳ್ಳಿ ನಿವಾಸಿ ಮಂಜು ಎಂಬಾತನೇ ಬಂಧಿತ ಆರೋಪಿ. ಈತ ಈ ಹಿಂದಿನಿಂದಲೂ ಇದೇ ಕೃತ್ಯವನ್ನು ಮಾಡುತ್ತಾ ಬಂದಿದ್ದನು. ಆದರೆ ಈ ಬಗ್ಗೆ ಯಾವುದೇ ಸಂಶಯ ಬಂದಿರಲಿಲ್ಲ. ಈ ನಡುವೆ ಈತನ ಮನೆಯಲ್ಲಿ ನವಿಲೊಂದರ ಕಾಲನ್ನು ಕಟ್ಟಿ ಮನೆಯಲ್ಲಿಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಈತ ನವಿಲನ್ನು ಸಾಕಿ ಬಳಿಕ ಏನು ಮಾಡುತ್ತಿದ್ದನು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ನವಿಲು ಮನೆಯಲ್ಲಿ ಸಾಕಿರುವ ವಿಷಯ ತಿಳಿದ ಮೇರೆಗೆ ಅರಣ್ಯ ಸಂಚಾರಿ ದಳದ ಎಸ್ಐ ಲಕ್ಷ್ಮಿ ನೇತೃತ್ವದ ತಂಡ ದಾಳಿ ಮಾಡಿದ್ದು, ಈ ವೇಳೆ ಮನೆಯಲ್ಲಿ ನವಿಲಿನ ಕಾಲಿಗೆ ಹಗ್ಗಕಟ್ಟಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ ನವಿಲಿನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.