ಮೈಸೂರು: ಸಾಹಿತಿ ಹಾಗೂ ಜನಾಂದೋಲನ ಮಹಾಮೈತ್ರಿಯ ಸಂಸ್ಥಾಪಕರಲ್ಲೊಬ್ಬರಾದ ದೇವನೂರು ಮಹಾದೇವ ಅವರ ಆರ್‌ಎಸ್‌ಎಸ್: ಆಳ, ಅಗಲ ಕೃತಿ ಪ್ರಜ್ಞಾವಂತರ ಗಮನ ಸೆಳೆದಿದೆ. ಆದರೆ ಈ ಕುರಿತು ಟೀಕೆ ಮಾಡಿದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಸಂಘ ಪರಿವಾರದ ಬಹಳಷ್ಟು ಮಂದಿ ಸುಮ್ಮನಿದ್ದಾರೆ ಎಂದು ಸಂಸ್ಥೆಯ ಎಸ್.ಆರ್.ಹಿರೇಮಠ್ ವ್ಯಂಗ್ಯವಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವನೂರ ಮಹಾದೇವ ಅವರು ಬರೆದುದು ಸತ್ಯವೇ ಆಗಿದೆ. ಈ ಕಾರಣದಿಂದಲೂ ಸಂಘ ಪರಿವಾರ, ಬಿಜೆಪಿಯವರು ಸುಮ್ಮನಿದ್ದಾರೆ. ಆದರೂ ಒಂದಲ್ಲ ಒಂದು ದಿನ ಚರ್ಚೆಯ ಅಖಾಡಕ್ಕೆ ಬರಲೇಬೇಕಾಗುತ್ತದೆ ಎಂದರು.
ಬಳಿಕ, ಕೇಂದ್ರದ ಮೂರು ಕರಾಳ ಮಸೂದೆಗಳನ್ನು ರೈತರ ಹೋರಾಟದ ಕಾರಣ ಪ್ರಧಾನಿ ವಾಪಸ್ ಪಡೆದರು. ಆ ವೇಳೆಯೂ ಯಾವುದೇ ಚರ್ಚೆಗೆ ಅವಕಾಶ ನೀಡಲಿಲ್ಲ. ಈ ನಡುವೆ ಪ್ರಸ್ತುತ ಕಾಲಘಟ್ಟದಲ್ಲಿ ಧರ್ಮಾಂಧರ ಕೈಗೆ ಸಿಕ್ಕು ನಮ್ಮ ದೇಶ ನರಳುತ್ತಿದೆ. ಹೀಗಾಗಿ ಒಂದು ನಿರ್ಣಾಯಕ ಹೋರಾಟ ಈಗ ನಡೆಯಬೇಕಾಗಿದೆ. ಆದ್ದರಿಂದ ಧರ್ಮಾಂಧರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ ಎಂಬ ಹೋರಾಟ ಅಗತ್ಯವಾಗಿದೆ ಎಂದು ತಿಳಿಸಿದರು.
2023ರ ರಾಜ್ಯ ಹಾಗೂ 2024ರ ಸಂಸತ್ ಚುನಾವಣೆ ಈ ಕಾರಣದಿಂದಾಗಿ ಅತ್ಯಂತ ಮಹತ್ವದ್ದಾಗಿವೆ. 1977ರಲ್ಲಿ ಸರ್ವಾಧಿಕಾರಿ ಇಂದಿರಾಗಾಂಧಿ ಅವರನ್ನು ಜನತೆ ಸೋಲಿಸಿದಂತೆ ಈ ಎರಡೂ ಚುನಾವಣೆಗಳಲ್ಲಿ ಎನ್‌ಡಿಎ ಹಾಗೂ ಬಿಜೆಪಿ ಮತ್ತು ಈ ಪಕ್ಷಗಳ ಹಿಂದೆ ಇರುವ ಇತರ ಪಕ್ಷಗಳನ್ನು ಜನತೆ ಸೋಲಿಸಬೇಕಾಗಿದೆ. ಆ.7ರಂದು ಮಹಾಮೈತ್ರಿಯ ವಿಶೇಷ ಸಭೆಯನ್ನು ಬೆಂಗಳೂರಿನಲ್ಲಿ ಕರೆಯಲಾಗಿದ್ದು, ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಆರ್‌ಎಸ್‌ಎಸ್ ಆಳ ಅಗಲ ಕೃತಿಯ ಕುರಿತು ವ್ಯಾಪಕ ಚರ್ಚೆಯಾಗಬೇಕಿದೆ. ಇದಕ್ಕಾಗಿ ಪುಸ್ತಕವನ್ನು ಮನೆಮನೆಗೆ ಹಳ್ಳಿಹಳ್ಳಿಗಳಿಗೆ ತಲುಪಿಸುತ್ತೇವೆ. ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪುಸ್ತಕ ವಿತರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ರಾಘವೇಂದ್ರ ಕುಷ್ಠಗಿ, ಬಸವಲಿಂಗಯ್ಯ, ಹೊಸೂರು ಕುಮಾರ್ ಹಾಜರಿದ್ದರು.