ಸಾಲಿಗ್ರಾಮ: ಭಾರೀ ಮಳೆಯಿಂದಾಗಿ ಸಾಲಿಗ್ರಾಮ ವ್ಯಾಪ್ತಿಯಲ್ಲಿ ಅಪಾರ ಹಾನಿ ಸಂಭವಿಸಿದ್ದು, ಜನರು ಆತಂಕದಿಂದ ಜೀವನ ಸಾಗಿಸುವಂತಾಗಿದೆ, ಒಂದೆಡೆ ಮನೆಗಳು ಕುಸಿದು ಬೀಳುತ್ತಿದ್ದರೆ ಮತ್ತೊಂದೆಡೆ ಮನೆ ತೇವಗೊಂಡು ನೆಲದಿಂದ ನೀರು ಉಕ್ಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಧಾರಾಕಾರವಾಗಿ ಸುರಿದ ಮಳೆಗೆ ಸಾಲಿಗ್ರಾಮ ತಾಲ್ಲೂಕಿನ ತಂದ್ರೆಕೊಪ್ಪಲು ಗ್ರಾಮದ ಲಕ್ಷ್ಮೇಗೌಡ ಎಂಬುವರಿಗೆ ಸೇರಿದ ವಾಸದ ಮನೆಯು ಕುಸಿದು ಬಿದ್ದಿದೆ. ಇದರಿಂದ ಲಕ್ಷ್ಮೇಗೌಡರ ಕುಟುಂಬಕ್ಕೆ ಅಪಾರ ನಷ್ಟ ಉಂಟಾಗಿದ್ದು ವಾಸಿಸುವ ಮನೆಗೆ ತೊಂದರೆಯುಂಟಾಗಿದೆ.
ಹೆಬ್ಸೂರು ಗ್ರಾಮದ ಜಗದೀಶ್ ಎಂಬುವರಿಗೆ ಸೇರಿದ ವಾಸದ ಮನೆ ನೆಲಕ್ಕುರುಳಿದೆ. ಮನೆಯ ಮತ್ತೆ ಹಲವು ಗೋಡೆಗಳು ಯಾವಾಗ ಬೇಕಾದರೂ ಬೀಳುವ ಸ್ಥಿತಿಗೆ ತಲುಪಿದೆ. ಕಡುಬಡವರಾದ ಇವರ ನೆರವಿಗೆ ಕೂಡಲೇ ತಾಲ್ಲೂಕು ಆಡಳಿತ ಧಾವಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಂದ್ರೆಕೊಪ್ಪಲು ಗ್ರಾಮದ ಶಿವಣ್ಣೇಗೌಡರ ಮಕ್ಕಳಾದ ಸುಭಾಷ್ ಮತ್ತು ಲೋಕೇಶ್ ಎಂಬುವರಿಗೆ ಸೇರಿದ ವಾಸದ ಮನೆಗಳು ನೆಲಕ್ಕುರುಳಿವೆ. ಹೆಂಡತಿ ಮಕ್ಕಳು ಹಾಗೂ ಜಾನುವಾರುಗಳು ಇರಲು ಮನೆಯಿಲ್ಲದೆ ಕಂಗಾಲಾಗಿದ್ದಾರೆ. ಮತ್ತೊಂದೆಡೆ ಗ್ರಾಮದಲ್ಲಿ ಪ್ರತಿನಿತ್ಯ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಗಳು ಶೀತಗೊಂಡು ಮನೆಯೊಳಗೆ ನೀರು ಬರುತ್ತಿದೆ.
ಗ್ರಾಮದ ಕೆಂಪೇಗೌಡರ ಮಗ ಶಿವಣ್ಣೇಗೌಡ ಎಂಬುವರ ತಂಬಾಕು ಹದಮಾಡುವ ಮನೆಯಲ್ಲಿ ನೀರು ಹರಿದು ಬರುತ್ತಿದ್ದು ಇದನ್ನು ಪ್ರತಿನಿತ್ಯ ಹೊರಗೆ ತೆಗೆಯುವುದೇ ಇವರ ಕಾಯಕವಾಗಿದೆ. ಇದರಿಂದ ತಂಬಾಕು ಹದವಾಗದೆ ನಷ್ಟಕ್ಕೆ ಸಿಲುಕಿದ್ದಾರೆ. ವ್ಯವಸಾಯಕ್ಕಾಗಿ ಸಾಲ ಸೋಲ ಮಾಡಿ ಬೆಳೆದಿರುವ ತಂಬಾಕು ಸುರಿಯುತ್ತಿರುವ ಮಳೆಯಿಂದ ಒಂದೆಡೆ ಹಾಳಾದರೆ ಮತ್ತೊಂದೆಡೆ ಮನೆಯಲ್ಲೇ ಶೀತಗೊಂಡು ನೀರು ಬರುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಟ್ಟಾರೆ ಈ ಬಾರಿಯ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದ್ದು ಜನ ಮಳೆಗೆ ಹೆದರಿ ಭಯದಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.