ಮೈಸೂರು: ವಿದ್ಯಾರ್ಥಿ ಯುವಜನರನ್ನು ಉದ್ಯಮಶೀಲತೆ ಕಡೆ ಆಕರ್ಷಿಸುವ ದಿಸೆಯಲ್ಲಿ ಆಯೋಜಿಸಿರುವ ಮೈಸೂರು ಸ್ಟಾರ್ಟ್‌ಅಪ್ ಪೆವಿಲಿಯನ್ ಮೂರು ದಿನಗಳ ನವೋದ್ಯಮ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ಮಾನಸಗಂಗೋತ್ರಿಯ ಎಸ್‌ಜೆಇಸಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ಪಾರಂಪರಿಕ ಮತ್ತು ಸಾಂಸ್ಕೃತಿಕ ನಗರವಾಗಿ ಪ್ರಸಿದ್ಧಿ ಪಡೆದಿರುವಂತೆಯೇ ಸೈಬರ್ ಸೆಕ್ಯೂರಿಟಿ ಹಬ್ ಆಗಿಯೂ ರೂಪುಗೊಳ್ಳುವ ಅಗತ್ಯತೆ ಇದೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರತಿನಿತ್ಯ ಒಂದಲ್ಲಾ ಒಂದು ಪ್ರಕರಣಗಳ ದಾಖಲಾಗುತ್ತಿದ್ದು, ಸೈಬರ್ ಕಳ್ಳರು ಡೇಟಾ ಕಳವು ಮಾಡುತ್ತಿದ್ದಾರೆ. ಹಾಗಾಗಿ ಸೈಬರ್ ಕ್ರೈಂ ತಡೆಯಲು ಪೂರಕವಾಗಿ ಸೈಬರ್ ಹಬ್ ಅನ್ನು ಬೆಳೆಸಬೇಕು. ಈ ಉದ್ಯಮ ಮೈಸೂರಿನಲ್ಲಿ ಆರಂಭಿಸಬೇಕೆಂದು ತಿಳಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನವ ಉದ್ಯಮಶೀಲತೆ ಬಗ್ಗೆ ಹೆಚ್ಚು ಚರ್ಚೆಯಾಗುತ್ತದೆ. ಜತೆಗೆ ಪ್ರೋತ್ಸಾಹ ಸಿಗುತ್ತಿದೆ. ವಿದ್ಯಾರ್ಥಿ ಯುವಜನರನ್ನು ಈ ಅವಕಾಶವನ್ನು ಬಳಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.
ಕೆಲವರು ಉದ್ಯೋಗ ಕೊಡುತ್ತಾರೆ. ಕೆಲವರು ಉದ್ಯೋಗಿಗಳಾಗುತ್ತಾರೆ. ಬಹುತೇಕರು ಉದ್ಯಮ ಸ್ಥಾಪಿಸಲು ಸಿದ್ಧರಿರುವುದಿಲ್ಲ. ಶ್ರಮಪಡಲು ಮುಂದಾಗುವುದಿಲ್ಲ. ಆದರೆ, ಇನ್ನೂ ಕೆಲವರು ತಮ್ಮ ಇತಿಮಿತಿ ಮೀರಿ ಉದ್ಯಮಿಗಳಾಗಲು ಶ್ರಮಿಸುತ್ತಾರೆ. ನವ ಉದ್ಯಮಿಗಳಲ್ಲಿ ಆಸಕ್ತಿ, ಶ್ರಮ, ಸವಾಲನ್ನು ಎದುರಿಸುವ ಧೈರ್ಯವಿದ್ದರೆ ಉದ್ಯಮಿಗಳಾಗುವುದು ಸವಾಲಿನ ಸಂಗತಿಯಲ್ಲ ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.