ಮೈಸೂರು: ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನ ಕೈಗೊಂಡ ಬೆನ್ನಲ್ಲೇ ದಸರಾಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ದಸರಾದ ಮುನ್ನುಡಿಯಾಗಿ ಗಜಪಯಣವನ್ನು ಆ.7ರಂದು ಹಮ್ಮಿಕೊಳ್ಳಲಾಗಿದ್ದು, ಗಜಪಯಣಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ದಸರಾದ ಚಟುವಟಿಕೆಗಳು ಗರಿಗೆದರಲಿವೆ.
ಕಳೆದ ಎರಡು ವರ್ಷಗಳ ಕಾಲ ಕೊರೊನಾ ಮಾರಿ ಕಾಡಿದ್ದರಿಂದ ಸರಳವಾಗಿ ನಡೆಸಲಾಗಿತ್ತು. ಹೀಗಾಗಿ ದಸರಾಕ್ಕೆ ಸಂಬಂಧಿಸಿದಂತೆ ಕೆಲವು ಕಾರ್ಯಕ್ರಮಗಳನ್ನು ಸರಳವಾಗಿ ನಡೆಸಿದ್ದರೆ, ಮತ್ತೆ ಕೆಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಈ ಬಾರಿ ಎಲ್ಲ ಕಾರ್ಯಕ್ರಮಗಳು ನಡೆಯುವುದರೊಂದಿಗೆ ದಸರಾಕ್ಕೆ ಎಂದಿನ ಕಳೆ ಬರಲಿದೆ. ಇದೀಗ ಅದ್ಧೂರಿ ಜಂಬೂಸವಾರಿಗಾಗಿ 17 ಆನೆಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 14 ಆನೆಗಳನ್ನು ಜಂಬೂಸವಾರಿಗೆ ಬಳಸಿಕೊಳ್ಳಲಾಗುತ್ತದೆ ಅಲ್ಲದೆ ಮೂರು ಆನೆಗಳನ್ನು ಹೆಚ್ಚುವರಿಯಾಗಿ ಕಾಯ್ದಿರಿಸಿದೆ.
ಈ ಗಜಪಡೆಯನ್ನು ಸಜ್ಜುಗೊಳಿಸಬೇಕಾದ ಕಾರಣ ದಸರಾಕ್ಕೆ ಸುಮಾರು ಎರಡು ತಿಂಗಳು ಇರುವಾಗಲೇ ಅವುಗಳು ಇರುವ ಆನೆಶಿಬಿರಗಳಿಂದ ಎರಡು ಹಂತಗಳಲ್ಲಿ ಆನೆಗಳನ್ನು ಮೈಸೂರಿನ ಅರಮನೆ ಆವರಣಕ್ಕೆ ಕರೆತರಲಾಗುತ್ತದೆ. ಮೊದಲಿಗೆ ಹುಣಸೂರಿನ ವೀರನಹೊಸಹಳ್ಳಿಯಿಂದ ಸಂಪ್ರದಾಯದಂತೆ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ. ಇದೇ ಗಜಪಯಣ. ವೀರನಹೊಸಹಳ್ಳಿಯಿಂದ ಹೊರಟು ಮೈಸೂರು ತಲುಪುವ ಆನೆಗಳು ಮೊದಲಿಗೆ ಅರಣ್ಯಭವದಲ್ಲಿ ವಾಸ್ತವ್ಯ ಹೂಡಲಿವೆ. ಆ ನಂತರ ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆಯಲ್ಲಿ ತೆರಳಿ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಆವರಣವನ್ನು ಪ್ರವೇಶಿಸಲಿವೆ.
ಇದೀಗ ಆ.7ರಂದು ವೀರನಹೊಸಹಳ್ಳಿಯಲ್ಲಿ ಗಜಪಯಣ ನಡೆಯಲಿದ್ದು, ಈ ಗಜಪಯಣದಲ್ಲಿ ಮೊದಲ ಹಂತದಲ್ಲಿ ಅಂಬಾರಿ ಆನೆ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ವಿಕ್ರಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಯನ್ನು ಕರೆತರಲಾಗುತ್ತಿದೆ. ಎರಡನೇ ಹಂತದಲ್ಲಿ ಗೋಪಾಲಸ್ವಾಮಿ, ಗೋಪಿ, ಶ್ರೀರಾಮ, ವಿಜಯ, ಪಾರ್ಥಸಾರಥಿ, ಆಗಮಿಸಲಿವೆ. ಸುಗ್ರೀವ, ಕುಂತಿ, ಗಣೇಶ ಕಾಯ್ದಿರಿಸಿದ ಆನೆಗಳಾಗಿವೆ.
ಆ.7ರಂದು ಬೆಳಿಗ್ಗೆ 9.01ರಿಂದ 9.35ರೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಹುಣಸೂರು ತಾಲೂಕು ವಿರನಹೊಸಳ್ಳಿಯಲ್ಲಿ ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದು, ಮಧ್ಯಾಹ್ನದೊಳಗೆ ಮೈಸೂರು ಅಶೋಕಪುರಂನಲ್ಲಿರುವ ಅರಣ್ಯ ಭವನ ತಲುಪಲಿದೆ. ಆ.10ರಂದು ಅರಣ್ಯ ಭವನದಿಂದ ಹೊರಟ ಗಜಪಡೆ ಮೈಸೂರು ಅರಮನೆ ಆವರಣವನ್ನು ಜಯಮಾರ್ತಾಂಡ ದ್ವಾರದ ಬಳಿ ಬೆಳಿಗ್ಗೆ 9.20ರಿಂದ 10ಗಂಟೆಯೊಳಗೆ ಸಲ್ಲುವ ಕನ್ಯಾಲಗ್ನದಲ್ಲಿ ಪ್ರವೇಶಿಸಲಿದೆ. ಇನ್ನು ಅರಮನೆ ಆವರಣದಲ್ಲಿ ಬೀಡು ಬಿಡುವ ಗಜಪಡೆಗೆ ಪ್ರತಿದಿನವೂ ತಾಲೀಮು ನಡೆಯಲಿದ್ದು, ಅಕ್ಟೋಬರ್ 5ರಂದು ನಡೆಯುವ ಜಂಬೂಸವಾರಿ ಮೆರವಣಿಗೆಯ ನಂತರ ಅ.7ರಂದು ಬೆಳಿಗ್ಗೆ ಗಜಪಡೆಗಳು ನಾಡಿನಿಂದ ಮತ್ತೆ ಕಾಡಿನತ್ತ ತೆರಳಲಿವೆ.