ಮೈಸೂರು: ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ಸಿನ ಅನೇಕ ನಾಯಕರು ತಮ್ಮ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಕೊಡುಗೆ ಇಲ್ಲ ಎಂದು ಕಿಡಿಕಾರಿದ್ದಾರೆ.
ನಂಜನಗೂಡು ತಾಲೂಕಿನ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಸ್ಥಳವಾದ ತಗಡೂರು ಗ್ರಾಮದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ಧ ಪಾದಯಾತ್ರೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ 1885ರಿಂದಲೂ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹಂತಗಳ ಹೋರಾಟ ನಡೆಸಿದ್ದಾರೆ. ಆದರೆ 1925ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್ ಯಾವೊಬ್ಬ ನಾಯಕನೂ ಸ್ವಾತಂತ್ರ್ಯ ಹೋರಾಟ ಮಾಡದೆ ವಿಮುಖರಾದರು. ಸ್ವಾತಂತ್ರ್ಯ ಹೋರಾಟಕ್ಕೆ ಆರ್‌ಎಸ್‌ಎಸ್ ಕೊಡುಗೆ ಶೂನ್ಯ ಎಂದು ವ್ಯಂಗ್ಯವಾಡಿದರು.
ಮೊಘಲರು 600 ವರ್ಷಗಳ ಕಾಲ ಭಾರತ ಆಳಿದರು. ಬ್ರಿಟಿಷರು 200 ವರ್ಷ ನಮ್ಮನ್ನು ಆಳ್ವಿಕೆ ಮಾಡಿ ದೇಶ ಲೂಟಿ ಮಾಡಿದರು. ಆಗ ಭಾರತ ಇಸ್ಲಾಂ ಆಗಲಿ ಅಥವಾ ಕ್ರಿಶ್ಚಿಯನ್ ಆಗಲಿಲ್ಲ. ಭಾರತ ಭಾರತವಾಗಿಯೇ ಉಳಿದಿದೆ. ಆದರೆ ಅಧಿಕಾರಕ್ಕೆ ಬಂದು ಎಂಟು ವರ್ಷವಾಗಿದೆ. ಒಂದು ಮತ, ಒಂದು ಧರ್ಮ, ಒಂದು ಪಕ್ಷ ಎಂಬ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಹರ್ ಘರ್ ತಿರಂಗ ಎಂದು ಹೇಳುವ ಮೋದಿ ಆರ್‌ಎಸ್‌ಎಸ್‌ನ ನಾಗಪುರ ಕಚೇರಿಯಲ್ಲಿ ೫೦ಕ್ಕೂ ಹೆಚ್ಚು ವರ್ಷಗಳವರೆಗೂ ಭಾಗವ ಧ್ವಜ ಹಾರಿಸಿದರಲ್ಲ ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಮಾಜಿ ಸಚಿವ.ಹೆಚ್.ಸಿ.ಮಹದೇವಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಸೇರಿದಂತೆ ಹಲವರು ಇದ್ದರು.