ಮೈಸೂರು: ವೀರನಹೊಸಹಳ್ಳಿಯಲ್ಲಿ ನಡೆದ ಗಜಪಯಣದ ಬಳಿಕ ಮೈಸೂರಿನ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಅಭಿಮನ್ಯು ನೇತೃತ್ವದ ದಸರಾ ಗಜಪಡೆಯನ್ನು ಬುಧವಾರ ಬೆಳಿಗ್ಗೆ ಸಕಲ ಸಂಪ್ರದಾಯದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸುವ ಮೂಲಕ ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಯಿತು.
ಮೊದಲಿಗೆ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಬೀಡು ಬಿಟ್ಟಿದ್ದ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಗಜಪಡೆಗೆ ಬೆಲ್ಲ, ಕಾಯಿ, ಹಣ್ಣುಗಳು, ವಿವಿಧ ಬಗೆಯ ಸಿಹಿ ತಿನಿಸುಗಳನ್ನು ನೀಡಿ ಅರಣ್ಯ ಭವನದಿಂದ ಬೀಳ್ಕೊಡಲಾಯಿತು. ಅಲ್ಲಿಂದ ಅಲಂಕಾರಗೊಂಡ ಗಜಪಡೆಯುವ ಅಭಿಮನ್ಯು ನೇತೃತ್ವದಲ್ಲಿ ಅರಣ್ಯ ಭವನದಿಂದ ಮೈಸೂರು ಅರಮನೆಯತ್ತ ಮೆರವಣಿಗೆಯಲ್ಲಿ ಸುಮಾರು 3.5 ಕಿ.ಮೀ ದೂರ ಸಾಗಿ ಅರಮನೆ ಆವರಣ ತಲುಪಿದವು. ಈ ಗಜಪಡೆಯ ನೇತೃತ್ವವನ್ನು ಡಿಸಿಎಫ್ ಡಾ.ಕರಿಕಾಳನ್ ವಹಿಸಿದ್ದರು.
ಅರಮನೆ ಆವರಣಕ್ಕೆ ಆಗಮಿಸಿದ ಗಜಪಡೆಯನ್ನು ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು ಅಲ್ಲದೆ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ಬೆಳಿಗ್ಗೆ 9.20ರಿಂದ 10ರ ಶುಭ ಲಗ್ನದಲ್ಲಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕ ರಾಮದಾಸ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್ ನಾಗೇಂದ್ರ, ಡಿಸಿ ಗೌತಮ್ ಬಗಾದಿ, ಎಸ್ಪಿ ಚೇತನ್, ಮೇಯರ್ ಸುನಂದ ಪಾಲನೇತ್ರ ಸೇರಿದಂತೆ ಹಲವುರು ಪೂಜೆಯಲ್ಲಿ ಭಾಗಿಯಾಗಿದ್ದರು.