ಮೈಸೂರು: ರಂಗಯಾನ ಟ್ರಸ್ಟ್ ಮೈಸೂರು ಸಂಸ್ಥೆಯು ಮೈಸೂರಿನ ಕಿರುರಂಗಮಂದಿರದಲ್ಲಿ ಮೂರು ದಿನಗಳ ಕಾಲ ನಡೆಸಿದ ಭರತರಂಗ-22 ನಾಟಕೋತ್ಸವ ಪ್ರೇಕ್ಷಕರ ರಂಜಿಸುವಲ್ಲಿ ಯಶಸ್ವಿಯಾಯಿತು.
ಕೇಂದ್ರ ಸಂಸ್ಕೃತಿ ನಿರ್ದೇಶನಾಲಯದ ಸಹಭಾಗಿತ್ವದಲ್ಲಿ ನಡೆದ ಭರತರಂಗ-22 ನಾಟಕೋತ್ಸವದಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರಿನ ಹವ್ಯಾಸಿ ಹಿರಿಯ ರಂಗತಂಡಗಳ ಮುಖ್ಯಸ್ಥರುಗಳಾದ ಕದಂಬ ರಂಗವೇದಿಕೆಯ ರಾಜಶೇಖರ ಕದಂಬ, ಅಭಿಯಂತರರು ಸಂಸ್ಥೆಯ ಸುರೇಶ್ ಬಾಬು, ಸಂಚಲನ ಸಂಸ್ಥೆಯ ದೀಪಕ್ ಮೈಸೂರು, ದೇಸೀರಂಗ ಸಂಸ್ಥೆಯ ಕೃಷ್ಣಜನಮನ ನೆರವೇರಿಸಿದ್ದು ವಿಶೇಷವಾಗಿತ್ತು. ನಂತರ ಪೂಜಾಕುಣಿತ, ರಂಗೀತೆಗಳ ಕಾರ್ಯಕ್ರಮ ನಂತರ ಉಧೋ ಉಧೋ ಎಲ್ಲವ್ವ ನಾಟಕ ಪ್ರದರ್ಶನ ಕಂಡಿತು.
ಎರಡನೇ ದಿನದ ವೇದಿಕೆಯಲ್ಲಿ ಮೈಸೂರಿನ ಹವ್ಯಾಸಿ ಯುವ ರಂಗತಂಡಗಳ ಮುಖ್ಯಸ್ಥರಾದ ಪ್ರಯೋಗ ಸಂಸ್ಥೆಯ ಪ್ರವೀಣ್ ಬೆಳ್ಳಿ, ಅದಮ್ಯ ರಂಗಶಾಲೆಯ ಚಂದ್ರು ಮಂಡ್ಯ, ಮೈಸೂರು ಮೈಮ್ ಟೀಮ್ ಸಂಸ್ಥೆಯ ಶೋಭಾ, ರಂಗಬಂಡಿ ಸಂಸ್ಥೆಯ ಮಧು ಮಳವಳ್ಳಿ ಉಪಸ್ಥಿತರಿದ್ದರು. ನಂತರ ಡೊಳ್ಳುಕುಣಿತ, ಸೂಫೀಗೀತೆಗಳು ನಂತರ ವಿಶ್ವಾಮಿತ್ರ ಮತ್ತು ಮೇನಕೆ ಡ್ಯಾನ್ಸ್ ಮಾಡೋದು ಏನಕ್ಕೆ? Ask mr Ynk ನಾಟಕ ಪ್ರದರ್ಶನ ಕಂಡಿತು.
ಮೂರನೇ ದಿನದ ಸಮಾರೋಪದ ವೇದಿಕೆಯಲ್ಲಿ ಬಣ್ಣ ಮತ್ತು ಅರಗು ಕಾರ್ಖಾನೆಯ ಮಾಜಿ ಅಧ್ಯಕ್ಷರಾದ ಎನ್.ವಿ.ಫಣೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ, ಡಾ.ಸುಜಾತಾ ಅಕ್ಕಿ, ನಾಟಕ ಅಕಾಡೆಮಿ ಸದಸ್ಯ ಜೀವನ್ ಕುಮಾರ್ ಹೆಗ್ಗೋಡು, ಜಾನಪದ ಅಕಾಡೆಮಿ ಸದಸ್ಯ ಶ್ರೀವತ್ಸ ಹಾಗೂ ರಂಗಯಾನ ಟ್ರಸ್ಟ್ ಮೈಸೂರು ಸಂಸ್ಥೆಯ ಅಧ್ಯಕ್ಷ ವಿಕಾಸ್ ಚಂದ್ರ ಉಪಸ್ಥಿತರಿದ್ದರು.
ನಂತರ ಪ್ರತಿ ವರ್ಷ ಕನ್ನಡ ರಂಗಭೂಮಿಯಲ್ಲಿ ಸಾಧನೆ ಮಾಡಿದವರಿಗೆ ಕೊಡಮಾಡುವ ಭರತರಂಗ ಪ್ರಶಸ್ತಿಯನ್ನು ಹೈದ್ರಾಬಾದಿನಲ್ಲಿ ಕನ್ನಡ ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿರುವ ವಿಠ್ಠಲ ಜೋಷಿ ಯವರಿಗೆ ನೀಡಿ ಗೌರವಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ನಾಗರಹೊಳೆಯ ಬುಡಕಟ್ಟು ನೃತ್ಯ, ನಟರಾಜ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್ ವತಿಯಿಂದ ದಶಾವತಾರ ನೃತ್ಯರೂಪಕ ನಂತರದಲ್ಲಿ ಸೋಲಿಗರ ಬಾಲೆ ನಾಟಕ ಪ್ರದರ್ಶನವಾಯಿತು.