ಪಿರಿಯಾಪಟ್ಟಣ: ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಕೆಆರ್‌ಎಸ್ ಪಕ್ಷದ ಪ್ರಮುಖ ಗುರಿಯಾಗಿದೆ ಎಂದು ಕೆಆರ್‌ಎಸ್ ಪಕ್ಷದ ರೈತ ಘಟಕದ ರಾಜ್ಯಾಧ್ಯಕ್ಷ ಜೋಗನಹಳ್ಳಿ ಗುರುಮೂರ್ತಿ ತಿಳಿಸಿದ್ದು ಭ್ರಷ್ಟಾಚಾರ ನಿರ್ಮೂಲನೆಗಾಗಿ ಜನ ಚೈತನ್ಯ ಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಕೆಆರ್ ಎಸ್ ಪಕ್ಷ ವತಿಯಿಂದ ನಡೆದ ಜನ ಚೈತನ್ಯ ಯಾತ್ರೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದ ರಾಜಕೀಯದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವ ಜನ ಚೈತನ್ಯ ಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಅರಿವು ಮೂಡಿಸಲಾಗುತ್ತಿದೆ. ಪ್ರಸ್ತುತ ರಾಜಕೀಯದ ದುರಾಡಳಿತ ವ್ಯವಸ್ಥೆಯಿಂದ ಜನರು ದಿಕ್ಕೆಟ್ಟಿದ್ದು ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಕೋಮು ದ್ವೇಷ ಹರಡಲಾಗುತ್ತಿದೆ ಎಂದು ಆರೋಪಿಸಿದರು.
ತಾಲ್ಲೂಕು ಅಧ್ಯಕ್ಷ ಅಜಿತ್ ಅವರು ಮಾತನಾಡಿ ಅಪರೂಪಕ್ಕೊಮ್ಮೆ ನಡೆಯುವ ಸರ್ಕಾರಿ ನೇಮಕಾತಿಗಳಲ್ಲೂ ಅಕ್ರಮ ತಾಂಡವವಾಡುತ್ತಿದ್ದು, ಲಂಚ ಕೊಟ್ಟು ಹುದ್ದೆಗೇರಿದ ಅಧಿಕಾರಿಗಳು ಜನರ ಸುಲಿಗೆ ಮಾಡಿ ಭ್ರಷ್ಟಾಚಾರಕ್ಕೆ ನೇರವಾಗಿ ಒತ್ತು ನೀಡುತ್ತಿದ್ದಾರೆ. ನಮ್ಮ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಆಂದೋಲನ ಯಾವುದೇ ವ್ಯಕ್ತಿಯ ವಿರುದ್ಧವಲ್ಲ ಸಮಾಜ ಸುಧಾರಣೆಗಾಗಿ ಎಂದರು.
ಈ ಸಂದರ್ಭ ಪಕ್ಷದ ಮುಖಂಡರಾದ ದಿನೇಶ್, ವೀರಭದ್ರ, ಸುರೇಶ್, ಶಶಿಕುಮಾರ್, ಮಲ್ಲೇಶ್, ಶೇಖರ್ ಇದ್ದರು.