ಮೈಸೂರು: ಮೈಸೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ದಸರಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಲು ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್ ಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮನವಿ ಮಾಡಿದ್ದಾರೆ.
ಈ ಸಂಬಂಧ ನಡೆಸಿದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು, ಕೋವಿಡ್ ಅಲೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣ ಸರಳ ದಸರಾವನ್ನು ಮತ್ತೆ ವಿಜೃಂಭಣೆಯಿಂದ ನಡೆಸುವ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿದ್ದು, ಈ ಬಾರಿಯ ದಸರಾವನ್ನು ಸಾಂಪ್ರಾದಾಯಿಕವಾಗಿ ಹಾಗೂ ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸುವ ಮೂಲಕ ನಾಡ ಹಬ್ಬ ದಸರಾದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ನವರಾತ್ರಿಯ ದಿನಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ಗಳು ಹಾಗೂ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವವರಿಗೆ ಮನವಿ ಮಾಡಿದರು. ಅಲ್ಲದೆ, ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಮೈಸೂರು ಜಿಲ್ಲೆಯಲ್ಲಿರುವ ಹಲವಾರು ಇಂಡಸ್ಟ್ರೀಸ್, ಎನ್.ಜಿ.ಒ ಹಾಗೂ ಖಾಸಗಿ ಕಂಪನಿಗಳು ಸಾಮಾಜಿಕ ಕಳಕಳಿಯಿಂದ ಹಲವಾರು ರೀತಿಯಲ್ಲಿ ಸಹಾಯ ನೀಡುವುದರ ಮೂಲಕ ಉತ್ತಮವಾಗಿ ಸ್ಪಂದಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದರು.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಆರ್.ಚೇತನ್ ಅವರು ಮಾತನಾಡಿ, ಈ ಬಾರಿಯ ದಸರಾದಲ್ಲಿ ನಡೆಯುವ ಯುವ ದಸರಾ ಹಾಗೂ ಯುವ ಸಂಭ್ರಮದ ಕಾರ್ಯಕ್ರಮದಲ್ಲಿ ಬಾಲಿವುಡ್ ನೈಟ್ ಹಾಗೂ ಸ್ಯಾಂಡಲ್ ವುಡ್ ನೈಟ್ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದ ಅಂಗವಾಗಿ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಸಂಗೀತಗಾರರನ್ನು ಅಥವಾ ನಟರನ್ನು ಕರೆಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಅವರು ಮಾತನಾಡಿ, ಈ ಬಾರಿಯ ದಸರಾದಲ್ಲಿ ಸ್ಪಾನ್ಸರ್ಸ್ಗಳನ್ನು ಗುರುತಿಸಿವುದರ ಜೊತೆಗೆ ಅವರ ಕಂಪನಿಗಳ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕವಾಗಿ ಪರಿಚಯಿಸಲು ಅನುಕೂಲವಾಗುತ್ತದೆ. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿಯೂ ಪ್ರಾಯೋಜಕರುಗಳ ಹೆಸರನ್ನು ಹಾಕಿಕೊಳ್ಳುವುದರ ಜೊತೆಗೆ ನೀಡುವ ಪ್ರಶಸ್ತಿಗಳಲ್ಲೂ ಹೆಸರನ್ನು ಹಾಕಿಸಿಕೊಳ್ಳಬಹುದು. ಇದರಿಂದ ಕಂಪನಿಗಳ ಹೆಸರು ಜನಪ್ರಿಯವಾಗಲು ಸಹಕಾರಿಯಾಗುತ್ತದೆ ಎಂದರು.
ದಸರಾ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳು ನಡೆದರೆ ಅಂತಹ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ಮಾಡಿದರೆ ಅಧಿಕೃತವಾಗಿ ಪ್ರಾಯೋಜಕರು ಎಂದು ಗುರುತಿಸಲಾಗುತ್ತದೆ. ದಸರಾ ಸಂಬAಧ 16 ಉಪಸಮಿತಿಗಳನ್ನು ರಚಿಸಲಾಗಿದ್ದು, ಈ ಉಪಸಮಿತಿಗಳ ವ್ಯಾಪ್ತಿಯಲ್ಲಿ ಪ್ರತಿದಿನ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಸಭೆಯಲ್ಲಿಯೇ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಡಿಆರ್‌ಸಿ ಚಿತ್ರಮಂದಿರದಲ್ಲಿ ಒಂದು ಪರದೆಯನ್ನು ಉಚಿತವಾಗಿ ನೀಡಲು ಚಿತ್ರಮಂದಿರದ ಮಾಲೀಕರು ತಿಳಿಸಿದರು. ಜೊತೆಗೆ ಪ್ರಮುಖ ಜನಪ್ರಿಯ ಕಂಪನಿಗಳಾದ ಕೋಕೋಕೋಲಾ, ಇಸ್ಕಾನ್, ಮುತ್ತೂಟ್ ಫೈನಾನ್ಸ್, ಎಸ್.ಬಿ.ಐ ಸೇರಿದಂತೆ ಅನೇಕ ಕಂಪನಿಗಳು ಪ್ರಾಯೋಜಕತ್ವ ವಹಿಸಲು ಮುಂದೆ ಬಂದಿವೆ.
ಈ ಬಾರಿಯ ದಸರಾದಲ್ಲಿ ಯುವ ಸಂಭ್ರಮ, ಯುವ ದಸರಾ, ರೈತ ದಸರಾ, ಕ್ರೀಡಾ ದಸರಾ ಸೇರಿದಂತೆ ಹಲವಾರು ಕಾರ್ಯಕ್ರಮ ಜರುಗಲಿದ್ದು, ಪ್ರಾಯೋಜಕತ್ವ ನೀಡುವವರು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಅಥವಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿ ಡಿ.ಡಿ ಅಥವಾ ಚೆಕ್ ಗಳನ್ನು ನೀಡಿ ಸ್ವೀಕೃತಿ ಪಡೆದುಕೊಳ್ಳಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ adcmy[email protected] & [email protected] ಅನ್ನು ಸಂಪರ್ಕಿಸಬಹುದಾಗಿದೆ.