ಮೈಸೂರು: ವಿಜಯದಶಮಿ ವೇಳೆ ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಮೈಸೂರಿಗೆ ಬರುವ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ 10ರಿಂದ 15 ಸಾವಿರ ಜನರನ್ನು ಕರೆತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ನಗರ ಕಾಂಗ್ರೆಸ್ ಭವನದ ಆವರಣದಲ್ಲಿ ನಡೆದ ಭಾರತ್ ಜೋಡೋ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಪ್ರಸ್ತುತ ಬೆಲೆ ಏರಿಕೆ ಗಗನಕ್ಕೇರಿದೆ. ಆದಾಯ ಪಾತಾಳಕ್ಕೆ ಇಳಿದಿದೆ. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ರೈತರ ಬದುಕಿಗೆ ಭದ್ರತೆ ಇಲ್ಲವಾಗಿದೆ ಎಂದು ನುಡಿದರು.
ರಾಹುಲ್ ಗಾಂಧಿ ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಬಿಜೆಪಿಯ ಕಿರುಕುಳಕ್ಕೆ ಅವರು ಹೆದರುವುದಿಲ್ಲ. ಪಿಎಂ ಸ್ಥಾನ ತ್ಯಾಗ ಮಾಡಿದ್ದಾರೆ. ಮುತ್ತಾತ ತಮ್ಮ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ. ತಾತಾ ಜೈಲಿನಲ್ಲಿದ್ದರು. ತಾಯಿ ಗುಂಡೇಟಿಗೆ ಬಲಿಯಾದರು. ಪ್ರಧಾನಿ ಸ್ಥಾನ ತ್ಯಾಗ ಮಾಡಿದರು. ಅವರು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪಾದಯಾತ್ರೆಯಿಂದ ನಮಗೆ ರಾಜಕೀಯ ಲಾಭ ಇದೆ. ಮುಂದಿನ 6 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ರಾಹುಲ್ ಗಾಂಧಿ ಮೈಸೂರು-ಚಾಮರಾಜನಗರ ಜಿಲ್ಲೆಗಳಿಗೆ ಬಂದಾಗ ಹೆಚ್ಚು ಜನರನ್ನು ಸೇರಿಸಿದರೆ ರಾಜಕೀಯ ಲಾಭ ಆಗುತ್ತದೆ. ಈ ಐತಿಹಾಸಿಕ ಪಾದಯಾತ್ರೆ ಯಶಸ್ವಿಗೊಳಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕಿಂತ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಹೇಳಿದರು.
ನರೇಂದ್ರ ಮೋದಿ 8 ವರ್ಷಗಳ ಆಡಳಿತದಲ್ಲಿ ತಳ ಸಮುದಾಯದ, ಮಧ್ಯಮ ವರ್ಗದ ಜನರು ನೆಮ್ಮದಿಯಾಗಿಲ್ಲ. ಸಮಾಜದಲ್ಲಿ ಶಾಂತಿ ಇಲ್ಲ. ಧರ್ಮ ರಾಜಕಾರಣದ ಮೂಲಕ ದೇಶ ಒಡೆಯಲಾಗುತ್ತಿದೆ. ಯಾವುದೇ ಧರ್ಮದ ಆಧಾರದಲ್ಲಿ ದೇಶ ಇಲ್ಲ. ನಾವೆಲ್ಲ ಮನುಷ್ಯರು ಮನುಷ್ಯರಾಗಿ ಬಾಳಬೇಕು ಎಂದರು.
ಭಾಷಣದ ವೇಳೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ನರೇಂದ್ರ ಮೋದಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಜನರು ಮೋದಿಯಲ್ಲ, ರಾಹುಲ್ ಗಾಂಧಿ ಎಂದು ಕೂಗಿದರು. ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಮೋದಿಯಲ್ಲ, ರಾಹುಲ್ ಗಾಂಧಿ ಎಂದು ಸ್ಪಷ್ಟಪಡಿಸಿದರು. ಇದು ಒಂದಿಷ್ಟು ಮುಜುಗರಕ್ಕೆ ಕಾರಣವಾಯಿತು.
ಭಾರತ್ ಜೋಡೋ ಸಿದ್ಧತಾ ಸಭೆಯಲ್ಲಿಯೇ ವೈದ್ಯರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಗ್ಯ ತಪಾಸಣೆ ಮಾಡಿದರು. ಆರಂಭದಲ್ಲಿ ನಿರಾಕರಿಸಿದ ಅವರು ತಪಾಸಣೆಗೆ ಒಳಗಾದರು. ತುಂಬಾ ಸುಸ್ತಾಗಿದ್ದೇನೆ. ಮನೆ ಬಿಟ್ಟು 11 ದಿನಗಳಾಯಿತು. ಪ್ರವಾಸ ಮಾಡುತ್ತಿದ್ದೇನೆ. ದೇಹದ ತಾಪಮಾನ 100ಮೀಟರ್ ಇದೆ. ಹಾಗಾಗಿ ವೈದ್ಯರು ತಪಾಸಣೆ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಭಾಷಣದ ವೇಳೆ ಪ್ರಸ್ತಾಪಿಸಿದ್ದು ಕಂಡು ಬಂತು.
ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಜಾನ್ ರೋಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ತನ್ವೀರ್‌ಸೇಠ್, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಮುಂತಾದವರು ಉಪಸ್ಥಿತರಿದ್ದರು