ಮೈಸೂರು: ಮೈಸೂರಿನಲ್ಲಿ ಸಾಹಸಸಿಂಹ ಡಾ.ವಿಷ್ಣು ಸೇನಾ ಬಳಗದ ವತಿಯಿಂದ ಡಾ.ವಿಷ್ಣುವರ್ಧನ್ 72ನೇ ಜನ್ಮ ದಿನಾಚರಣೆಯನ್ನು ಕೇಕ್ ಕತ್ತರಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಲಾಯಿತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾ.ವಿಷ್ಣುವರ್ಧನ್ ಉದ್ಯಾನವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮೇಯರ್ ಶಿವಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ವರನಟ ಡಾ.ರಾಜ್ ಕುಮಾರ್ ಉದ್ಯಾನವನವಿದೆ. ಅದರ ಪಕ್ಕದಲ್ಲೇ ಸಾಹಸಸಿಂಹ ಡಾ.ವಿಷ್ಣುವರ್ಧನ ಉದ್ಯಾನವನ ಅಭಿಮಾನಿಗಳೇ ಹೆಸರಿಟ್ಟು ದಶಕದಿಂದ ಅವರ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಡಾ.ರಾಜಣ್ಣ ಮತ್ತು ವಿಷ್ಣು ದಾದಾ ಅವರಿಬ್ಬರು ನಮ್ಮ ಚಿತ್ರರಂಗದ ಎರಡು ಕಣ್ಣುಗಳು. ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ದೇಶ ವಿದೇಶದಿಂದ ಬರುತ್ತಾರೆ ಎಂದರು.
ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ ನೇತೃತ್ವದಲ್ಲಿ ಸಾಹಸಸಿಂಸ ವಿಷ್ಣುವರ್ಧನ ಅಭಿಮಾನಿಗಳು ವಿಷ್ಣು ಪ್ರತಿಮೆ ಸ್ಥಾಪನೆ ಮತ್ತು ಉದ್ಯಾನವನಕ್ಕೆ ಹೆಸರಿಡಬೇಕೆಂದು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸುಪ್ರಿಂ ಕೋರ್ಟ್ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆ ವಿಚಾರ ಸೂಕ್ಷ್ಮವಾಗಿ ಕಾನೂನಿನ ನಿಯಮ ಪಾಲಿಸಬೇಕಾಗುತ್ತದೆ. ಆದರೆ ಉದ್ಯಾನವನಕ್ಕೆ ಡಾ.ವಿಷ್ಣುವರ್ಧನರ ನಾಮಕರಣ ವಿಚಾರ ನಗರಪಾಲಿಕೆಯ ಮುಂದಿನ ಕೌನ್ಸಿಲ್‌ನಲ್ಲಿ ನಾನೇ ಧ್ವನಿ ಎತ್ತಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಸಾಹಸಸಿಂಹ ಡಾ.ವಿಷ್ಣು ಸೇನಾ ಬಳಗದ ಅಧ್ಯಕ್ಷ ಎಂ.ಬಿ.ಪಾರ್ಥಸಾರಥಿ ಮಾತನಾಡಿ, ಈ ಬಾರಿಯ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ವಿಷ್ಣುವರ್ಧನ್ ಭಾವಚಿತ್ರವನ್ನು ಅಲಂಕರಿಸಬೇಕು ಹಾಗೂ ಜಂಬೂ ಸವಾರಿ ಮೆರವಣಿಗೆಯಲ್ಲಿ ಡಾ.ವಿಷ್ಣು ಶಬ್ದಚಿತ್ರ ಬರಬೇಕೆಂದು ಮನವಿ ಮಾಡಿದರು.
ವಿಷ್ಣುವರ್ಧನ್ ಮೂಲತಃ ಮೈಸೂರಿನವರಾದರೂ ವಿಶ್ವದೆಲ್ಲಡೆ ಜನಪ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾದವು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜತೆಗೆ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ಕಲಾವಿದರಿಗೆ ಮಾದರಿಯಾಗಿದ್ದವು. ಕನ್ನಡ ನೆಲ ಜಲ ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ. ಚಿತ್ರನಗರಿ ಮೈಸೂರಿನಲ್ಲಿ ಸ್ಥಾಪನೆಯ ಪರಿಕಲ್ಪನೆ ನೀಡಿದ್ದೇ ವಿಷ್ಣುವರ್ಧನ ಎಂದರು.
ಕಾರ್ಯಕ್ರಮದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ, ನಗರ ಪಾಲಿಕೆ ಸದಸ್ಯ ಸತೀಶ್, ಕರ್ನಾಟಕ ವಿಪ್ರ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್.ರಾಜೇಶ್, ಸುರೇಶ್ ಗೋಲ್ಡ್, ವಿನಯ್ ಕಣಗಾಲ್, ರಾಕೇಶ್ ಕುಂಚಿಟಿಗ, ಬಸವರಾಜು, ಮಹದೇವ್, ಧನರಾಜ್, ನವೀನ್, ಪೇಪರ್ ಮಧು ಸೇರಿದಂತೆ ಹಲವರು ಭಾಗವಹಿಸಿದ್ದರು.