ಮೈಸೂರು: ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ದಸರಾವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಇಲಾಖೆ ಮುಂದಾಗಿದೆ. ಸೆ.26ರಂದು ರಾಷ್ಟ್ರಪತಿ ದ‍್ರೌಪದಿ ಮುರ್ಮು ಅವರು ಮೈಸೂರಿಗೆ ಆಗಮಿಸಿ ದಸರಾ ಉದ್ಘಾಟಿಸಲಿದ್ದಾರೆ. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರ ಜೊತೆಗೆ ಹೊರ ಜಿಲ್ಲೆಗಳ ಒಟ್ಟು 3,079 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುತ್ತಿದೆ ಎಂದು ಹೇಳಲಾಗಿದೆ. ಬಂದೋಬಸ್ತ್ ಗಾಗಿ ಪೊಲೀಸರು ಮೂರು ಹಂತಗಳಲ್ಲಿ ಆಗಮಿಸಲಿದ್ದಾರೆ.
ಮೊದಲ ಹಂತದಲ್ಲಿ ಸೆ.24ರಂದು ಓರ್ವ ಎಸ್ಪಿ, ನಾಲ್ವರು ಡಿವೈಎಸ್ಪಿ , 14ಇನ್ಸ್ ಪೆಕ್ಟರ್, 55 ಸಬ್ ಇನ್ಸ್ ಪೆಕ್ಟರ್, 23ಎಎಸ್ ಐ ಸೇರಿದಂತೆ 610 ಸಿವಿಲ್, 630 ಸಂಚಾರ, 46 ಸಿಎಆರ್, ಡಿಎಆರ್, 15ಕೆಎಸ್ ಆರ್ ಪಿ ಪೊಲೀಸರು ಮೈಸೂರಿಗೆ ಆಗಮಿಸಿದರೆ, ಸೆ.27ರಂದು 151 ಸಿವಿಲ್ ಮತ್ತು 65 ಸಂಚಾರ ಪೊಲೀಸರು ಸೇರಿ 216ಮಂದಿ ಆಗಮಿಸಲಿದ್ದಾರೆ.
ಮೂರನೇ ಹಂತದಲ್ಲಿ ಅ.3ರಂದು ಮೂವರು ಅಡಿಷನಲ್ ಎಸ್ಪಿಗಳು, 18ಡಿವೈಎಸ್ಪಿಗಳು, 55ಇನ್ಸಪೆಕ್ಟರ್ ,115ಸಬ್ ಇನ್ಸಪೆಕ್ಟರ್ ಸೇರಿ 1,391 ಸಿವಿಲ್, 157ಸಂಚಾರ ಹಾಗೂ 10ಕೆಎಸ್ ಆರ್ ಪಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಹೊರ ಜಿಲ್ಲೆಗಳಿಂದ ಬರುವ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳಿಗೆ ಮೈಸೂರಿನ ಕಲ್ಯಾಣ ಮಂಟಪ, ಶಾಲೆ, ಹೋಟೆಲ್, ಹಾಸ್ಟೆಲ್ ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಊಟ-ತಿಂಡಿಯನ್ನು ಮೈಸೂರು ನಗರ ಪೊಲೀಸ್ ಘಟಕದಿಂದ ಪೂರೈಸಲಾಗುತ್ತದೆ. ಈ ಬಾರಿ ಯಾವುದೇ ಗೊಂದಲ ಏರ್ಪಡದಂತೆ ಮತ್ತು ಜನ ಯಾವುದೇ ಭಯವಿಲ್ಲದೆ ನೆಮ್ಮದಿಯಾಗಿ ದಸರಾ ವೀಕ್ಷಿಸಲು ಅನುವು ಮಾಡಿಕೊಡಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.
ಈಗಾಗಲೇ ಜನರಿಗೆ ಕಿರಿಕಿರಿ ಮಾಡುವ ತುತ್ತೂರಿಗಳನ್ನು ಮಾರಾಟ ಮತ್ತು ಬಳಸದಂತೆ ನಿಷೇಧ ಹೇರಲಾಗಿದೆ. ದಸರಾ ಉದ್ಘಾಟನೆ ಬಳಿಕ ನಗರಕ್ಕೆ ದಸರಾ ಕಳೆಬರಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಮುಖ ಮಾಡುವ ಸಾಧ್ಯತೆ ಇದೆ.