ಮೈಸೂರು: ಜನಸಾಮಾನ್ಯರಿಗೆ ಅರಿವು ಮೂಡಿಸುವ, ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮತ್ತು ಹೃದಯ ರಕ್ತನಾಳದ ಕಾಯಿಲೆ (ಸಿವಿಡಿ) ಹೊರೆಯ ವಿರುದ್ಧ ಹೋರಾಡಲು ಸಾಮಾನ್ಯ ಜನರನ್ನು ಸಜ್ಜು ಗೊಳಿಸುವ ಕಾರ್ಯಕ್ಕೆ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಂದಾಗಿದೆ.
ಈ ಬಾರಿ “ಥೋಡ ದಿಲ್ ಥೋಡ ಹಾರ್ಟ್ ” ಧ್ಯೇಯ ವಾಕ್ಯದೊಂದಿಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರೋಗ್ಯಕರ ಹೃದಯದ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದು ಈ ಸಂಬಂಧ ಹೊರಡಿಸಲಾಗಿರುವ ಅರಿವು ಜಾಥಾಕ್ಕೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಐ.ಪಿ.ಎಸ್ ರವರು ಚಾಲನೆ ನೀಡಿದ್ದಾರೆ.
ಜಾಥಾವು ಮೈಸೂರು ನಗರದ ಎಲ್ಲಾ 65 ವಾರ್ಡ್‌ಗಳಲ್ಲಿ ಸಂಚರಿಸಲಿದ್ದು, ಆರೋಗ್ಯ ಕಾರ್ಯಕರ್ತರ ತಂಡ ಮತ್ತು “ಥೋಡ ದಿಲ್ ಥೋಡ ಹಾರ್ಟ್ ” ವೇಷಧಾರಿಗಳು ವಾಹನದೊಂದಿಗೆ ಪ್ರಯಾಣಿಸುತ್ತಾ, ಹೃದ್ರೋಗದಿಂದ ಉಂಟಾಗುವ ಅಪಾಯದ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕರಾದ ಡಾ. ಎಂಎನ್ ರವಿ ಅವರು “ಪಾರಂಪರಿಕ ನಗರಿ ಮೈಸೂರಿನಲ್ಲಿ ಆರೋಗ್ಯ ರಕ್ಷಣೆಯ ಪ್ರವರ್ತಕರಾಗಿರುವ ನಾವು ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಮ್ಮ ಪ್ರತಿಜ್ಞೆಯನ್ನು ಮುಂದುವರಿಸಲು ನಮ್ಮ ಈ ವರ್ಷದ ಧ್ಯೇಯ ವಾಕ್ಯದ ಅನ್ವಯ ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಸಂಚಾರಿ ವಾಹನವನ್ನು ಸಜ್ಜು ಗೊಳಿಸಿದ್ದೇವೆ. ಈ ವಾಹನವು ಮುಂದಿನ 30 ದಿನಗಳ ಕಾಲ ಮೈಸೂರಿನ ಎಲ್ಲ 65 ವಾರ್ಡ್ ಗಳಲ್ಲಿ ಸಂಚರಿಸಿ ಜನರಲ್ಲಿ ಆರೋಗ್ಯವಂತ ಹೃದಯದ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬಾರದಂತೆ ತಡೆಯುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ವೈದ್ಯರು ನೀಡುವ ಸಲಹೆಯಂತೆ ಜೀವನ ಶೈಲಿ ರೂಪಿಸಿಕೊಂಡರೆ ಕಾಯಿಲೆಯಿಂದ ದೂರ ಉಳಿಯಬಹುದು ಎಂದು ಅಭಿಪ್ರಾಯಪಟ್ಟರು.
ಡಾ ಜಯಂತ್, ಆರ್ ಸಿ ಹೆಚ್, ಮೈಸೂರು ಜಿಲ್ಲೆ. ಹೆಸರಾಂತ ಹೃದ್ರೋಗ ತಜ್ಞರಾದ ಡಾ. ಕೇಶವ ಮೂರ್ತಿ ವಿ ಮತ್ತು ಡಾ ಶ್ರೀನಿವಾಸ್.ಪಿ , ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಶ್ರೀ ಪವನ್ ಕುಮಾರ್ ಪಿ, ಮಾರ್ಕೆಟಿಂಗ್ ಮುಖ್ಯಸ್ಥರಾದ ಕೆ.ವಿ.ಕಾಮತ್ ಎನ್.ಎಚ್.ಮೈಸೂರಿನ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.