ಮೈಸೂರು: ರಾಜ್ಯದ ಎಲ್ಲ ಭತ್ತದ ಬೆಳೆಗಾರರಿಗೂ ಪ್ರೋತ್ಸಾಹ ಧನ ನೀಡಬೇಕು. ಕೇಂದ್ರ ಸರ್ಕಾರ ಭತ್ತಕ್ಕೆ ನಿಗಧಿಮಾಡಿರುವ ಎಂಎಫ್ಸಿ ಜತೆಗೆ ರಾಜ್ಯ ಸರ್ಕಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಮಾತ್ರ ಪ್ರತಿ ಕ್ವಿಂಟಾಲ್ಗೆ 500 ರೂ ಪ್ರೋತ್ಸಾಹ ಧನ ನೀಡುತ್ತಿದೆ. ಇದನ್ನು ರಾಜ್ಯದ ಎಲ್ಲ ಭತ್ತ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಮಾಡಿರುವ ಖರ್ಚು ಕೂಡ ವಾಪಸ್ ಬರುತ್ತಿಲ್ಲ. ಹೀಗಾಗಿ ರಾಜ್ಯದ ಭತ್ತ ಬೆಳೆಯುವ ಪ್ರದೇಶದಲ್ಲಿ ಪ್ರತಿ ವರ್ಷ ಭತ್ತ ಬೆಳೆಯುವ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಕಂಡು ಹಿಡಿದು ಭತ್ತದ ಬೆಳೆಗಾರರ ರಕ್ಷಣೆಗೆ ಬರುವಂತೆ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆದು ಒತ್ತಾಯಿಸಿದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರ ಕೇವಲ ಮೂರು ಜಿಲ್ಲೆಗೆ ಮಾತ್ರ ಪ್ರೋತ್ಸಾಹ ಧನ ನೀಡಿ ಉಳಿದ ಜಿಲ್ಲೆಗಳಿಗೆ ನೀಡದೇ ತಾರತಮ್ಯ ಮಾಡಿದೆ ಎಂದು ಕಿಡಿ ಕಾರಿದರು.
ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷಕ್ಕಿಂತ ಹೆಚ್ಚು ಜನರಿಗೆ ಪಡಿತರವನ್ನು ವಿತರಿಸುತ್ತಿದ್ದು, ಹೊರರಾಜ್ಯದಿಂದ ತರಿಸುತ್ತಿರುವ ಅಕ್ಕಿಗೆ ಕಡಿವಾಣ ಹಾಕಿ ಈ ಪಡಿತರ ವ್ಯವಸ್ಥೆಗೆ ರಾಜ್ಯದ ಭತ್ತ ಖರೀದಿಸಲು ಲಿಂಕ್ ಮಾಡಿದರೆ ಸಂಪೂರ್ಣ ಭತ್ತವನ್ನು ಎಂಎಫ್ಸಿ ಮತ್ತು ಪ್ರೋತ್ಸಾಹ ಧನದಲ್ಲಿ ಕೊಂಡು ರೈತರಿಗೆ ಉತ್ತೇಜನ ನೀಡಬಹುದು. ಆದರೆ, ಸರ್ಕಾರ ಇದಕ್ಕೆ ಮುಂದಾಗದೇ ಇರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಸರ್ಕಾರ ತಾರತಮ್ಯ ನೀತಿಯನ್ನು ಕೈ ಬಿಟ್ಟು ಎಲ್ಲಾ ಜಿಲ್ಲೆಗಳಿಗೆ ಪ್ರೋತ್ಸಾಹ ಧನದ ನೀತಿಯನ್ನು ಅನ್ವಹಿಸದಿದ್ದರೇ ಸಧ್ಯದಲ್ಲೇ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಳೆದ ಮೂರು ತಿಂಗಳಿನಿಂದಲೂ ಕಬ್ಬಿಗೆ ನ್ಯಾಯಯುತ ಬೆಲೆ ನಿಗಧಿಮಾಡಬೇಕು. ರಾಜ್ಯ ಸರ್ಕಾರ ಎಸ್ಎಪಿಯನ್ನು ಘೋಷಣೆ ಮಾಡಬೇಕೆಂದು ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಸುಳ್ಳು ಹೇಳುತ್ತಲೇ ಕಬ್ಬಿಗೆ ಬೆಲೆ ನಿಗಧಿ ಮಾಡದೇ ನುಣುಚಿಕೊಳ್ಳುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಪಿ.ಮರಂಕಯ್ಯ ಹಾಜರಿದ್ದರು.