ಮೈಸೂರು: ಬೆಳಗಾವಿ ಗಡಿ ವಿವಾದಕ್ಕೆ ಮೈಸೂರಿನಲ್ಲಿ ದನಿ ಎತ್ತುವ ಮೂಲಕ ಹೋರಾಟದ ಸಂಗಾತಿ ಶಿವರಾಮು ಕಾಡನಕುಪ್ಪೆ ಅವರಿಗೆ ಗೌರವ ಸಲ್ಲಿಸೋಣ ಎಂದು ಹಿರಿಯ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್ ಅಭಿಪ್ರಾಯಪಟ್ಟರು.
ವಿಜಯನಗರ ಮೊದಲನೇ ಹಂತದ ಕನ್ನಡ ಸಾಹಿತ್ಯ ಭವನದಲ್ಲಿ ಸಂವಹನ ಪ್ರಕಾಶನ, ಜಿ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ ಶಿವರಾಮು ಕಾಡನಕುಪ್ಪೆ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭದ ಅಧಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಬೆಳಗಾವಿ ಗಡಿ ವಿವಾದ ಇರಲಿಲ್ಲ. ಈಗ ಮತ್ತೆ ಮುನ್ನೆಲೆಗೆ ಬಂದಿದೆ. ನಮ್ಮ ಮನೆಯ ಬಾಗಿಲಿಗೆ ಅನೇಕ ಸಮಸ್ಯೆಗಳು ಬಂದಿವೆ. ಹೋರಾಟವೂ ಕಡಿಮೆಯಾಗಿದೆ. ದನಿ ಎತ್ತಬೇಕಿದೆ. ಹೋರಾಟ ರೂಪಿಸಬೇಕಿದೆ ಎಂದರು.
ನಾವೆಲ್ಲರೂ ಭಾರತೀಯರು ಎಂಬುದು ಬೇರೆ ಮಾತು. ಹಾಗಂತ ನಮ್ಮ ಮನೆ ಒಳಗಡೆ ಬೇರೆಯವರನ್ನು ಬಿಡುತ್ತೇವೆಯೇ? ಗಡಿ ವಿವಾದಕ್ಕೆ ಯಾಕೆ ಕಿತ್ತಾಡಬೇಕು? ಈಗ ಭಾಷಾವಾರು ಪ್ರಾಂತ್ಯ ರಚನೆಗೆ ಮತ್ತಷ್ಟು ಪ್ರಚಾರ ಕೊಡಬೇಕು. ಗಡಿಗಳಲ್ಲಿ ಜನರು ಮಾತಾಡುವ ಭಾಷೆಯ ಆಧಾರದ ಮೇಲೆ ಆಯಾಯ ರಾಜ್ಯಗಳಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಶಿವರಾಮು ಕಾಡನಕುಪ್ಪೆ ಅವರು ಗಾಂಧಿ, ಅಂಬೇಡ್ಕರ್, ಲೋಹಿಯಾ ಅನೇಕರ ಬಗ್ಗೆ ಚರ್ಚಿಸುತ್ತಿದ್ದೆವು. ಸಮಾಜ ಬದುಕಿನ ಬಗ್ಗೆ ಅತಂತ್ಯ ಕಳಕಳಿಯಿಂದ ಮಾತಾಡುತ್ತಿದ್ದರು. ಗಡಿ ವಿಷಯ ಕಾಡನಕುಪ್ಪೆ ಅವರಿಗೆ ಪ್ರಿಯವಾದ ವಿಷಯವಾಗಿತ್ತು. ಹೋರಾಟದ ಮುಂಚೂಣಿಯಲ್ಲಿದ್ದರು. ಅವರ ಹೆಸರನ್ನು ಮುಂದಿಟ್ಟುಕೊಂಡು ಹೋರಾಟ ಮಾಡೋಣ ಎಂದು ಹೇಳಿದರು.
ಸಾಹಿತಿ ಜಿ.ಪಿ.ಬಸವರಾಜು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಿವರಾಮು ಕಾಡನಕುಪ್ಪೆ ಅವರು ವಿಮರ್ಶಕರಾಗಿ ಎತ್ತರಾಗಿ ಏರಬೇಕಾದವರು ಪದ್ಯ, ಕಾದಂಬರಿ ಬರೆದರು. ಕುಕ್ಕರಹಳ್ಳಿ ದಲಿತ ಕುಟುಂಬಗಳ ಅಲೆ ಮಾರಿ ಕುಟುಂಬಗಳ ಬಗ್ಗೆ ಬರೆದರು. ಮಾರಕವಾದ ಕ್ಯಾನ್ಸರ್ ಕಾಯಿಲೆ, ಅಪಘಾತವನ್ನು ಮೆಟ್ಟಿ ನಿಂತರು. ಸಾವಿನ ಜತೆ ಹೋರಾಡುತ್ತ ಸಾಹಿತ್ಯ ಕೃಷಿ ನಡೆಸಿದರು ಎಂದರು.
ಕಸಾಪ ಅಧಕ್ಷ ಮಡ್ಡೀಕೆರೆ ಗೋಪಾಲ, ಪ್ರೊ.ಕೆ.ಕಾಳಚನ್ನೇಗೌಡ, ಲೇಖಕ ಪ್ರೊ.ಜಿ.ಚಂದ್ರಶೇಖರ್, ಪತ್ರಕರ್ತ ಬಿ.ಎಂ.ಹನೀಫ್ ಶಿವರಾಮು ಕಾಡನಕುಪ್ಪೆ ಅವರೊಂದಿಗಿನ ಅನುಭವಗಳನ್ನು ಹಂಚಿಕೊಂಡರು.