ತಿ.ನರಸೀಪುರ: ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿ ಗ್ರಾಮದ ಯುವಕನೊಬ್ಬ ಬಲಿಯಾದ ನೆನಪು ಮಾಸುವ ಮುನ್ನವೇ ಚಿರತೆ ಮತ್ತೊಂದು ಬಲಿಯನ್ನು ಪಡೆದೆ ಘಟನೆ ಎಸ್.ಕೆಬ್ಬೆ ಹುಂಡಿ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ರಮೇಶ್ ನಾಯಕ ಎಂಬುವರ ಪುತ್ರಿ ಮೇಘನಾ(22) ಪ್ರಥಮ ಬಿ.ಕಾಂ. ವಿದ್ಯಾಭ್ಯಾಸ ಮಾಡುತಿದ್ದ ವಿದ್ಯಾರ್ಥಿನಿ ಗುರುವಾರ ಸಂಜೆ ಚಿರತೆ ದಾಳಿಗೆ ತುತ್ತಾಗಿದ್ದು, ತಾಲೂಕಿನಲ್ಲಿ ಚಿರತೆ ದಾಳಿ ನಿರಂತರ ಮುಂದುವರೆದಿದೆ.
ಯುವತಿ ಮನೆ ಹಿಂಭಾಗಕ್ಕೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ. ತಕ್ಷಣ ಚಿರತೆ ದಾಳಿಯನ್ನು ಗಮನಿಸಿದ ಮನೆಯವರು ಹಾಗೂ ಅಕ್ಕಪಕ್ಕದವರ ಚಿರಾಟಕ್ಕೆ ಚಿರತೆ ಯುವತಿಯನ್ನು ಬಿಟ್ಟು ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಮೇಘನಾಳನ್ನು ಚಿಕಿತ್ಸೆಗಾಗಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
ಯುವತಿ ಕೊನೆಯುಸಿರೆಳೆಯುತಿದ್ದಂತೆ ಸಾರ್ವಜನಿಕ ಆಸ್ಪತ್ರೆ ಮುಂದೆ ಸಹಸ್ರಾರು ಸಂಖ್ಯೆಯಲ್ಲಿದ್ದ ಗ್ರಾಮಸ್ಥರು, ರೈತ ಮುಖಂಡರು,ದ.ಸಂ.ಸ ಮುಖಂಡರು ರೊಚ್ಚಿಗೆದ್ದು ಅರಣ್ಯ ಇಲಾಖೆಯ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಅಶ್ವಿನ್ ಕುಮಾರ್ ಪ್ರತಿಭಟನೆಗೆ ಕುಳಿತು ಆಕ್ರೋಶ ವ್ಯಕ್ತಪಡಿಸಿದರು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಹಾಗೂ ಡಿಸಿಎಫ್ ಕಮಲಾ ಕರಿಕಾಳನ್ ರವರನ್ನು ಶಾಸಕ ಅಶ್ವಿನ್ ಕುಮಾರ್ ತೀವ್ರ ತರಾಟೆಗೆ ತೆಗೆದುಕೊಂಡರು. ತಾಲ್ಲೂಕಿನಲ್ಲಿ ಚಿರತೆ ಹಾವಳಿ ಮಿತಿಮೀರಿದೆ ಚಿರತೆ ದಾಳಿಗೆ ಯುವಕ ಬಲಿಯಾಗಿ ಒಂದು ತಿಂಗಳು ಆಗಿದೆ ಈಗ ಮತ್ತೊಂದು ಯುವತಿ ಚಿರತೆದಾಳಿಗೆ ತುತ್ತಾಗಿದೆ ನೀವು ಏನು ಮಾಡುತಿದ್ದೀರಿ ಜನರ ಜೀವದ ಜೊತೆ ಚೆಲ್ಲಾಟ ಆಡುತಿದ್ದೀರಾ ಎಂದು ಛೀಮಾರಿ ಹಾಕಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಅವರು ಅರಣ್ಯ ಇಲಾಖೆ ವತಿಯಿಂದ ಸ್ಥಳದಲ್ಲೇ 5 ಲಕ್ಷ ಪರಿಹಾರ ನೀಡಲಾಗುತ್ತದೆ ಶವಪರೀಕ್ಷೆ ಮಗಿದ ಎರಡು ಮೂರು ದಿನದಲ್ಲಿ ಮತ್ತೆ 2.5 ಲಕ್ಷ ನೀಡಲಾಗು ವುದು ಹಾಗೂ ಚಿರತೆ ಹಿಡಿಯಲು 15 ಪರಿಣಿತರ ತಂಡ ರಚಿಸಿ ಇಂದಿನಿಂದಲೇ ಕಾರ್ಯಚರಣೆ ಜೊತೆಗೆ ಕಂಡಲ್ಲಿ ಗುಂಡು ಹಾರಿಸಲಾಗುವುದು ಸಂತ್ರಸ್ಥ ಕುಟುಂಬದ ಬಬ್ಬರಿಗೆ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ಆ ಕುಟುಂಬಕ್ಕೆ ಐದು ವರ್ಷದ ವರಗೆ ಪ್ರತಿತಿಂಗಳು ಎರಡು ಸಾವಿರ ಮಾಸಾಸನ ಹಾಗೂ ತಿ.ನರಸೀಪುರ ಆರ್.ಎಫ್.ಒ ಗೆ ಕಡ್ಡಾಯ ರಜೆ ಮತ್ತು ವರ್ಗಾವಣೆ ಜೊತೆಗೆ ಅವರ ಮೇಲೆ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದರೆ ಅಮಾನತ್ತು ಮಾಡಲಾಗುವುದು ಅಲ್ಲದೆ ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಅರಣ್ಯ ಇಲಾಖೆ ನೀಡುವ 7.5 ಲಕ್ಷ ಪರಿಹಾರವನ್ನು ನಾನು ಒಪ್ಪುದಿಲ್ಲ ಸಂತ್ರಸ್ಥ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ಅರಣ್ಯ ಇಲಾಖೆ ಕೂಡಿಸಲೇ ಬೇಕು ಹಾಗೂ ಒಂದು ವಾರದೊಳಗೆ ಚಿರತೆ ಕಾಣಿಸದಂತ್ತೆ ಕ್ರಮವಹಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟ ತಾವು ಊಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ,ಮಾಜಿ ಜಿ.ಪಂ.ಸದಸ್ಯ ತಲಕಾಡು ಮಂಜುನಾಥ್. ದ.ಸಂ.ಸ ಮುಖಂಡರಾದ ಆಲಗೂಡು ಚಂದ್ರಶೇಖರ್, ಶಿವಕುಮಾರ್, ಕರುಹಟ್ಟಿ ಪ್ರಭುಸ್ವಾಮಿ,ರೈತ ಮುಖಂಡ ಕಳ್ಳಿಪುರಂ ಮಹದೇವಸ್ವಾಮಿ, ಶಂಕರ್, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಆರ್.ಮಣಿಕಂಠ್ ರಾಜ್ ಗೌಡ, ಪುರಸಭಾ ಸದಸ್ಯರಾದ ಬಾದಾಮಿ ಮಂಜು, ಮೆಡಿಕಲ್ ನಾಗರಾಜು, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಅಮ್ಜದ್ ಖಾನ್ ಸೇರಿದಂತೆ ವಿವಿಧ ಸಂಘ ಸಂಸ್ಥೆ ಮುಖಂಡರು ಭಾಗವಹಿಸಿದ್ದರು.
ಘಟನಾ ಸ್ಥಳದಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಮೈಸೂರು ಜಿಲ್ಲಾ ಎಸ್.ಪಿ ಚೇತನ್ ನೇತೃತ್ವದಲ್ಲಿ ಡಿವೈಎಸ್ಪಿ ಗೋವಿಂದರಾಜು ಮೊಕ್ಕಾಂ ಹೂಡಿದ್ದರು, ಪಿಎಸ್ಐ ತಿರುಮಲ್ಲೇಶ್ ಬಂದೋಬಸ್ತು ಏರ್ಪಡಿಸಿದ್ದರು.