ಮೈಸೂರು: ಜೆಎಸ್‍ಎಸ್ ರೇಡಿಯೋ 91.2ಎಫ್‍ಎಂ. ಸಮುದಾಯ ಬಾನುಲಿ ಕೇಂದ್ರವು ಮೈಸೂರು ಮಹಾನಗರ ಪಾಲಿಕೆಯ ಸೇವಾಸೌಲಭ್ಯಗಳು ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಆಯೋಜಿಸಿದ್ದ ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್ ರವರು ಸಾರ್ವಜನಿಕರ ಕರೆಗಳಿಗೆ ಸ್ವಂದಿಸಿದರು.
ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮದಲ್ಲಿ ನಿರೂಪಕರು ಮತ್ತು ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಮೇಯರ್ ಆಗಿ ಅಧಿಕಾರ ಸ್ವೀಕರಿಸದ ಕೆಲವೇ ದಿನಗಳಲ್ಲಿ ಮೈಸೂರು ನಗರದ ಅಭಿವೃದ್ಧಿಯ ಉದ್ದೇಶದಿಂದ ಎಲ್ಲಾ ನಗರ ಪಾಲಿಕೆಯ ಸದಸ್ಯರನ್ನೊಳಗೊಂಡು ವಾರಣಾಸಿ ಮತ್ತು ಮುಂಬೈಗೆ ಭೇಟಿ ನೀಡಿ ಪ್ರಾತೇಕ್ಷಿಕ ಅನುಭವವನ್ನು ಪಡೆದುಕೊಂಡಿದ್ದೇವೆ. ಇಲ್ಲಿ ಕಂಡು ಬಂದ ಹಲವು ವಿಷಯಗಳನ್ನು ನಾವು ನಮ್ಮ ಮೈಸೂರಿನಲ್ಲೂ ಅಳವಡಿಸಿಕೊಳ್ಳುವ ಯೋಜನೆಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನ ಪರಂಪರೆಯನ್ನು ಉಳಿಸುವುದು, ಬೆಳೆಸುವುದು ನಮ್ಮ ಆದ್ಯತೆಯಾಗಿದೆ ಆ ನಿಟ್ಟಿನಲ್ಲಿ ನಮ್ಮ ಕಾರ್ಯ ನಡೆಯಲಿದೆ ಎಂದರು.
ಸಾರ್ವಜನಿಕರ ಕೆರೆಗಳನ್ನು ಆಲಿಸಿದ ಮೈಸೂರಿನ ಮಹಾಪೌರರು: ಈ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿದ ಮಹಾಪೌರರು ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಯಪ್ರೌವೃತ್ತನಾಗುತ್ತೇನೆ ಎಂದರು.