News Kannada
Monday, February 06 2023

ಮೈಸೂರು

ಮೈಸೂರು: ಅರಮನೆ ಆವರಣದಲ್ಲಿ ಎದ್ದು ನಿಂತ ಪುಷ್ಪಲೋಕ

Mysuru: Pushpaloka stands up in the palace premises
Photo Credit : By Author

ಮೈಸೂರು: ಕ್ರಿಸ್ ಮಸ್ ರಜೆಯ ಮಜಾ ಅನುಭವಿಸುವ ಸಲುವಾಗಿ ಪ್ರವಾಸಿಗರು ಅರಮನೆ ನಗರಿಗೆ ಲಗ್ಗೆಯಿಡುತ್ತಿದ್ದು, ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ನೆರೆದಿದ್ದು ಹೀಗೆ ಆಗಮಿಸುವ ಪ್ರವಾಸಿಗರನ್ನು ಅರಮನೆ ಆವರಣದಲ್ಲಿ ಸೃಷ್ಟಿಯಾದ ಪುಷ್ಪಲೋಕ ಆಕರ್ಷಿಸುತ್ತಿದೆ.

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮ ಇಮ್ಮಡಿಗೊಳಿಸಿ, ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಅರಮನೆ ಅಂಗಳದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಪುಷ್ಪಪ್ರೇಮಿಗಳನ್ನು ಸೆಳೆಯುವುದರೊಂದಿಗೆ ಅರಮನೆಗೆ ಮೆರಗು ತಂದಿದೆ. ಅರಮನೆ ಆಡಳಿತ ಮಂಡಳಿ 10 ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಸಂಜೆ ಚಾಲನೆ ನೀಡಿದ್ದು, ವಾರಾಂತ್ಯವಾದ್ದರಿಂದ ಮೊದಲ ದಿನವೇ ಸಾವಿರಾರು ಜನರು ಅರಮನೆಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.

ಈ ಹಿಂದೆ ಅರಮನೆ ಆವರಣದಲ್ಲಿ ಮಾಗಿ ಉತ್ಸವ ನಡೆಸಲಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದ ನಡೆದಿರಲಿಲ್ಲ. ಕಳೆದ ವರ್ಷ ಕೊರೊನಾ ಮಾರ್ಗ ಸೂಚಿಯೊಂದಿಗೆ ಬರೀ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಬಾರಿ ಅದು ಮುಂದುವರೆದಿದೆ. ಇದೀಗ ಅರಮನೆ ಆವರಣಕ್ಕೆ ಭೇಟಿ ನೀಡಿದರೆ ಎಲ್ಲೆಂದರಲ್ಲಿ ಶೋಭಿಸುವ ಪುಷ್ಪರಾಣಿಯರು ನಮ್ಮನ್ನು ಆಕರ್ಷಿಸುತ್ತಿದ್ದು ಕಣ್ಣನ್ನು ತಂಪುಗೊಳಿಸುತ್ತಿದೆ. ಪುಷ್ಪಪ್ರದರ್ಶನಕ್ಕೊಂದು ಸುತ್ತುಹೊಡೆದರೆ ಪುಷ್ಪಲೋಕ ತೆರೆದುಕೊಳ್ಳುತ್ತಾ ಹೋಗುತ್ತದೆ. ಸುಮಾರು 55 ಅಡಿ ಉದ್ದ, 12 ಅಡಿ ಅಗಲ, 28 ಅಡಿ ಎತ್ತರದಲ್ಲಿ ಸುಮಾರು 12 ಲಕ್ಷ ಹೂಗಳಿಂದ ಮೈದಳೆದಿರುವ ಕಾಶಿ ವಿಶ್ವನಾಥ ದೇವಸ್ಥಾನ ಈ ಬಾರಿಯ ಫಲಪುಷ್ಪ ಪ್ರದರ್ಶನ ಕ್ಕೆ ಪ್ರಮುಖ ಮೆರುಗಾಗಿದೆ.

ಕಾಶಿ ವಿಶ್ವನಾಥ ದೇಗುಲವನ್ನು ಗುಲಾಬಿ, ಸೇವಂತಿಗೆ ಸೇರಿದಂತೆ ಲಕ್ಷಾಂತರ ಹೂಗಳಿಂದ ನಿರ್ಮಿಸಲಾಗಿದ್ದು ನೋಡುಗರು ನಿಬ್ಬೆರಗಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲದೆ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ನಮೀಬಿಯಾ ದೇಶದಿಂದ ಪ್ರಾಣಿ ವಿನಿಮಯ ಮಾಡಿಕೊಂಡಿರುವ ಚೀತಾಗಳು, ಯೋಗ ಫಾರ್ ಲೈಫ್ ಎಲ್ಲವೂ ಹೂವಿನಿಂದಲೇ ಸೃಷ್ಠಿಯಾಗಿ ಪುಷ್ಪಪ್ರೇಮಿಗಳ ಮನಕ್ಕೆ ಲಗ್ಗೆಯಿಡುತ್ತದೆ. ರಾಜವಂಶಸ್ಥ ಜಯಚಾಮರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಜತೆಗೆ ಕುಳಿತು ಸಂಭಾಷಣೆ ಮಾಡುತ್ತಿರುವ ಮಾದರಿ ಕಲಾಕೃತಿ, ಶಂಕರಾಚಾರ್ಯರ ಚಿತ್ರ, ರಂಗನತಿಟ್ಟು ಪಕ್ಷಿಧಾಮದ ಮಾದರಿ, ಖ್ಯಾತ ಹಾಕಿಪಟು ಧ್ಯಾನಚಂದ್, ಚಿತ್ರ ಕಲಾವಿದ ರಾಜಾ ರವಿವರ್ಮ ಮಾದರಿ ಕಣ್ಮನ ಸೆಳೆಯುತ್ತಿದೆ.

ಇನ್ನು ಈ ಬಾರಿಯ ದಸರಾದಲ್ಲಿ ಭಾಗವಹಿಸಿದ್ದ ಗಜಪಡೆಯ ಲಕ್ಷ್ಮೀ ಮತ್ತು ಅದರ ಮರಿ ದತ್ತಾತ್ರೇಯದ ಮಾದರಿ, ಅಮರ್ ಜವಾನ್ ಯುದ್ಧ ಸ್ಮಾರಕದ ಮಾದರಿ, ಪದ್ಮಶ್ರೀ ಪುರಸ್ಕೃತ ಭಗೀರಥಿ ಆಮೈ ಮಹಾಲಿಂಗಾನಾಯ್ಕ, ಕರಾವಳಿಯಲ್ಲಿ ನಡೆಯುವ ಕಂಬಳ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಾದರಿ ಮೈದಾಳಿ ನಿಂತಿವೆ. ಹೂವಿನಿಂದ ಅಲಂಕೃತವಾದ ಹೃದಯ ಸಂಕೇತದ ಸೆಲ್ಫಿ ಮಾಡೆಲ್ ಗಳು ಸೆಲ್ಪಿ ಪ್ರಿಯರಿಗಾಗಿಯೇ ನಿರ್ಮಿಸಲಾಗಿದೆ. ಇದರೊಂದಿಗೆ ಕಾಡಾನೆ ದಾಳಿಗೆ ಮೃತಪಟ್ಟ ಭವಿಷ್ಯದ ಅಂಬಾರಿ ಆನೆ ಎಂದು ಬಿಂಬಿತವಾಗಿದ್ದ ಗೋಪಾಲಸ್ವಾಮಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ಪುಷ್ಪಪ್ರೇಮಿಗಳಿಗೆ ತಾಜಾತನ ನೀಡುವ ಸಲುವಾಗಿ ಹತ್ತು ದಿನಗಳ ಅವಧಿಯಲ್ಲಿ ಒಂದು ಬಾರಿ ಹೂವು, ತರಕಾರಿಗಳನ್ನು ಬದಲಾಯಿಸಲಾಗುತ್ತದೆ. ಅರಮನೆ ವರಹಾ ಉದ್ಯಾನದಲ್ಲಿರುವ ವರ್ಟಿಕಲ್ ಗಾರ್ಡನ್ನ್ನು ಸುಮಾರು 25 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳನ್ನು ಜೋಡಣೆ ಮಾಡಲಾಗಿದೆ. ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಕೋಲಿಯಸ್, ಸಿಲೋಷಿಯ ಇನ್ನಿತರ 32 ಜಾತಿಯ ಹೂವುಗಳು ಇದಕ್ಕೆ ಬಳಕೆಯಾಗಿವೆ. ಗುಲಾಬಿ, ಕ್ರೈಸಾಂಥಿಮಂ, ಪಿಂಗ್ ಪಾಂಗ್, ಊಟಿ ಕಟ್ ಫ್ಲವರ್ ಇನ್ನಿತರ ಸೇರಿ ಅಂದಾಜು 4 ಲಕ್ಷ ಹೂಗಳಿಂದ ವೈವಿಧ್ಯಮಯ ಅಲಂಕಾರ ಮಾಡಲಾಗಿದೆ.

See also  ಮೈಸೂರು: ಚಿರತೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ಯಾವುದೇ ಸುಳಿವು ಸಿಕ್ಕಿಲ್ಲ! 

ಫಲಪುಷ್ಪ ಪ್ರದರ್ಶನದ ವಿಶೇಷವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಭಾರತೀಯ ಸೇನೆಯಲ್ಲಿ ಮಹತ್ತರ ಸೇವೆ ಸಲ್ಲಿಸಿ ಶೌರ್ಯಚಕ್ರ ಸೇರಿದಂತೆ ಅತ್ಯುನ್ನತ ಪದವಿ ಅಲಂಕರಿಸಿರುವ ನಿವೃತ್ತ ಸೇನಾ ನಾಯಕರ ಸಾಧನೆ, ಶೌರ್ಯ ಕುರಿತಂತೆ ಕಿರುಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜನರಲ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ಫೀಲ್ಡ್ ಮಾರ್ಷಲ್ ಜನರಲ್ ತಿಮ್ಮಯ್ಯ, ಮಾರ್ಷಲ್ ಆಫ್ ದಿ ಇಂಡಿಯನ್ ಏರ್ಫೋರ್ಸ್ ಅರ್ಜುನ್ ಸಿಂಗ್, ಶೌರ್ಯಚಕ್ರ ಪ್ರಶಸ್ತಿ ಪಡೆದ ಸುಬೇದಾರ್ ಲೂಯಿಸ್ ಪೆರೇರಾ, ನಾಯಕ್ ಬಸವರಾಜ್, ಹವಾಲ್ದಾರ್ ಮಹೇಶ್ ಅವರ ಶೌರ್ಯ ಪರಾಕ್ರಮ ಕುರಿತಂತೆ ಕಿರುಚಿತ್ರ ಬಿತ್ತರಿಸಲಾಗುತ್ತದೆ. 10 ದಿನಗಳವರೆಗೆ ಪ್ರದರ್ಶನಗೊಳ್ಳುವ ಕಿರುಚಿತ್ರ ವೀಕ್ಷಿಸಲು 50 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಅರಮನೆ ಮುಂಭಾಗ ಸಿಡಿಮದ್ದು ಪ್ರದರ್ಶನ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು