ಮೈಸೂರು: ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಪಾಲಿಸಬೇಕು ಮತ್ತು ಉತ್ತಮವಾದ ಸೇವೆಯನ್ನು ಸಾರ್ವಜನಿಕರಿಗೆ ನೀಡಿ ಎಂದು ಜಿಲ್ಲಾ ಪೊಲೀಸ್ ಆಯುಕ್ತರಾದ ರಮೇಶ್ ಬಿ. ತಿಳಿಸಿದರು.
ಮೈಸೂರು ನಗರ ಪೊಲೀಸ್ ಮತ್ತು ಮೈಸೂರು ನಗರ ಸಂಚಾರ ಪೊಲೀಸ್ ವತಿಯಿಂದ ನಗರದ ಪುರಭವನದಲ್ಲಿ ಅಪರಾಧ ತಡೆ ಮಾಸಚರಣೆ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟ್ಯಾಕ್ಸಿ ಮತ್ತು ಆಟೋಚಾಲಕರಿಗೆ ಅಪರಾಧ ತಡೆ ಹಾಗೂ ಸಂಚಾರ ಅರಿವು ಎಂಬ ವಿಶೇಷ ಕಾರ್ಯಕ್ರಮವನ್ನು ಚಾಲಕರಲ್ಲಿ ಅಪಘಾತಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೈಸೂರು ನಗರವು ಇತಿಹಾಸವನ್ನು ಒಳಗೊಂಡ ನಗರವಾಗಿದ್ದು, ಅತಿ ಹೆಚ್ಚು ಪ್ರಯಾಣಿಕರು ಮತ್ತು ಪ್ರವಾಸಿಗರು ಬರುವ ನಗರವಾಗಿದೆ. ಪ್ರಯಾಣಿಕರು ಸುಗಮವಾಗಿ ಸಂಚರಿಸಲು ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರ ಪಾತ್ರ ಮುಖ್ಯವಾಗಿದೆ. ಅದರಿಂದ ನೀವು ಉತ್ತಮ ರೀತಿಯ ಕೆಲಸ ಕಾರ್ಯಗಳನ್ನು ಮಾಡಬೇಕು. ಆಟೋದಲ್ಲಿ ಬರುವ ಪ್ರಯಾಣಿಕರ ಜೊತೆ ವಿನಯದಿಂದ ವರ್ತಿಸಿ ಅವರಿಗೆ ಉತ್ತಮವಾದ ಸೇವೆ ನೀಡಬೇಕು. ಮಧ್ಯರಾತ್ರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮತ್ತು ಹೆಣ್ಣು ಮಕ್ಕಳು ನಿಮ್ಮ ಮೇಲೆ ನಂಬಿಕೆ ಇಟ್ಟು ಪ್ರಯಾಣಿಸಿತ್ತಾರೆ ಆದ್ದರಿಂದ ಅವರ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಎಂದರು.
ಪ್ರತಿಯೊಬ್ಬ ಆಟೋ ಮತ್ತು ಟ್ಯಾಕ್ಸಿ ಚಾಲಕರು ನಿಮ್ಮ ದಾಖಲೆಗಳನ್ನು ಹೊಂದಿರಬೇಕು. ವಾಹನ ಪರವಾನಗಿ ಪಡೆಯದೇ ಇರುವವರು ಆದಷ್ಟು ಬೇಗ ಪಡೆದುಕೊಳ್ಳಿ. ಅದಕ್ಕಾಗಿ ನಮ್ಮ ಇಲಾಖೆಯು ನಿಮ್ಮ ಜೊತೆಗೂಡಿ ನಿಮಗೆ ಬೇಕಾದ ದಾಖಲಾತಿಗಳನ್ನು ಒದಗಿಸುವ ಕಾರ್ಯವನ್ನು ನಡೆಸುತ್ತೇವೆ. ಸಂಚಾರಿ ಸಮಸ್ಯೆಗಳು ಯಾವುದೇ ಇದ್ದರೂ ನಮ್ಮ ಇಲಾಖೆಯನ್ನು ಸಂಪರ್ಕಿಸಿ ಮತ್ತು ನೇರವಾಗಿ ನಮ್ಮ ಕಚೇರಿಗೆ ಬಂದು ನಿಮ್ಮ ಸಮಸ್ಯೆಯನ್ನು ತಿಳಿಸಬಹುದು ಎಂದು ಹೇಳಿದರು.
ಆಟೋ–ಟ್ಯಾಕ್ಸಿ ಚಾಲಕರೆಂದರೆ ನಗರದಲ್ಲಿ ಪ್ರವಾಸಿ ಗೈಡ್ಗಳಿದ್ದಂತೆ, ಪರಸ್ಥಳದಿಂದ ಬರುವ ಪ್ರಯಾಣಿಕರಿಗೆ ಶೋಷಣೆ ರಹಿತವಾಗಿ ಪ್ರಯಾಣದರವನ್ನು ಪಡೆದು ನಿಗದಿತ ಸ್ಥಳಕ್ಕೆ ಬಿಡಬೇಕು ಹಾಗೂ ನಿಮ್ಮ ವಾಹನಗಳಿಗಾಗಿ ನಿಗದಿಯಾಗಿರುವ ನಿಲ್ದಾಣಗಳಲ್ಲೆ ವಾಹನವನ್ನು ನಿಲ್ಲಿಸಬೇಕು.