ಮೈಸೂರು: ರಂಗಾಯಣದಲ್ಲಿ ಪ್ರದರ್ಶನ ಕಂಡ `ಸಾಂಬಶಿವ ಪ್ರಹಸನ’ ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅವಹೇಳನ ಮಾಡಿರುವುದಕ್ಕೆ ಸ್ವತಃ ನಾಟಕದ ಕರ್ತೃ ಡಾ. ಚಂದ್ರಶೇಖರ ಕಂಬಾರರು ಆಕ್ಷೇಪ ವ್ಯಕ್ತಪಡಿಸಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಡಿ.31ರ ಸಂಜೆ 6.30ಕ್ಕೆ ಕಂಡ `ಸಾಂಬಶಿವ ಪ್ರಹಸನ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರು ರಚಿಸಿರುವ ನಾಟಕವನ್ನು ನಿರ್ದೇಶಕ ಕಾರ್ತಿಕ ಉಪಮನ್ಯು ತಿರುಚಿ, ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ ಹಲವು ಭಾಗ್ಯಗಳನ್ನು ವ್ಯಂಗ್ಯ ಮಾಡಲಾಗಿತ್ತು. ಅಲ್ಲದೇ, ಕಳ್ಳತನ ಭಾಗ್ಯವನ್ನು ನೀಡಬೇಕಾಗಿತ್ತು ಎಂದೂ ಅಸಹ್ಯಕರವಾಗಿ ಚಿತ್ರಸಲಾಗಿತ್ತು. ಅಲ್ಲದೇ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನೇ ಹೋಲುವಂತೆ ಪಾತ್ರ ಸೃಷ್ಟಿಸಿ ಕೇಡಿ ಆಂಕಲ್ ಎಂದೂ ಮೂದಲಿಸಲಾಗಿತ್ತು.
ಇದನ್ನು ಖಂಡಿಸಿ ಅಂದು ತಡರಾತ್ರಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿರುವ ಹಿರಿಯರೂ ಆದ ಡಾ. ಚಂದ್ರಶೇಖರ ಕಂಬಾರರು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟವರು, ಇಲ್ಲದ ಸಾಹಿತ್ಯವನ್ನು ಸೇರಿಸಿರುವವರು ಸೇರಿದಂತೆ ಇಡೀ ನಾಟಕ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿರುವುದು ಪ್ರಶಂಸನೀಯ ಎಂದಿದ್ದಾರೆ.