ಮೈಸೂರು: ಅಂಬೇಡ್ಕರ್ರವರ ಸಂವಿಧಾನವನ್ನು ಬೆಳಕಾಗಿ ಮಾಡಿಕೊಂಡು ಮಾನವೀಯತೆ ಮನುಷ್ಯತ್ವವನ್ನು ಬೆಳೆಸಿಕೊಂಡು ಆದರ್ಶ ಶಿಕ್ಷಕರಾಗಬೇಕೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾಸಮನ್ವಯ ಅಧಿಕಾರಿ ಎನ್. ಮುನಿರಾಜು ಕರೆ ನೀಡಿದರು.
ಪಡುವಾರಹಳ್ಳಿಯಲ್ಲಿರುವ ಡಾ.ಬಾಬುಜಗಜೀವನರಾಂ ಭವನದಲ್ಲಿ ಕರ್ನಾಟಕ ರಾಜ್ಯ ಕ್ರೈಸ್ ಪ್ರಾಂಶುಪಾಲರ ಸಂಘದ ಮೈಸೂರು ಜಿಲ್ಲಾ ಘಟಕದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸತಿಶಾಲೆಗಳಲ್ಲಿ ಮಕ್ಕಳಿಗೆ ಗಿಡಗಳನ್ನು ದತ್ತು ನೀಡಿ ಅದ್ಭುತ ಪರಿಸರ ನಿರ್ಮಾಣ ಮಾಡಿ. ಶಾಲೆಯ ಸಮಸ್ಯೆಯನ್ನು ಬೀದಿಗೆಳೆದು ಶಾಲೆಯ ಆವರಣದಲ್ಲಿ ರಾಜಕಾರಣ ಮಾಡಬೇಡಿ, ಭಾರತದಲ್ಲಿ ಸಂವಿಧಾನ ಇರುವುದರಿಂದ ನಾವೆಲ್ಲಾ ನೆಮ್ಮದಿಯಿಂದ ಇದ್ದೇವೆ. ಶಾಲೆಗೆ ನೂರರಷ್ಟು ಪಲಿತಾಂಶ ಬಂದರೆ ಸಾಲದು ಪ್ರತಿ ವಿದ್ಯಾರ್ಥಿಯು ಶೇ. 100ರಷ್ಟು ಅಂಕ ಪಡೆಯುವಂತೆ ಮಾಡಿ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್. ಮಹೇಶ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಅಂಕಗಳನ್ನು ಆಧಾರವಾಗಿಟ್ಟುಕೊಂಡು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದನ್ನು ಬಿಟ್ಟು ಮೌಲ್ಯಧಾರಿತ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನೋಭಾವದಿಂದ ಕೆಲಸ ಮಾಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿ. ಮಾಲತಿ ಮಾತನಾಡಿ ಗುರುವಿಗೆ ಪುರಾತನ ಕಾಲದಿಂದಲೂ ಗೌರವಯುತವಾದ ಸ್ಥಾನವಿದ್ದು, ಐ.ಎ.ಎಸ್., ಕೆ.ಎ.ಎಸ್. ಅಧಿಕಾರಿಗಳಾಗಿದ್ದರೂ ಸಹ ಅವರ ಹಿಂದೆ ಒಬ್ಬ ಗುರುವಿನ ಪರಿಶ್ರಮವಿರುತ್ತದೆ. ಆದ್ದರಿಂದ ಶಿಕ್ಷಕರು ಮಕ್ಕಳೊಂದಿಗೆ ಹೃದಯ ಸಂವಾದ ಕಾರ್ಯಕ್ರಮ ನಡೆಸಬೇಕು. ವಸತಿ ಶಾಲೆಗಳ ಮಕ್ಕಳು ಕರ್ನಾಟಕ ರಾಜ್ಯವೇ ಹಿಂತಿರುಗಿ ನೋಡುವಂತೆ ಸಾಧನೆ ಮಾಡಬೇಕು ಎಂದರು.
ಸಮಾರಂಭದಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿ ಪೋಷಕರು, ಬಡ್ತಿ ಪಡೆದ ಶಿಕ್ಷಕರು ಉತ್ತಮ ಅಂಕ ಬರಲು ಕಾರಣರಾದ ವಿಷಯ ತಜ್ಞ ಶಿಕ್ಷಕರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ವಸತಿ ಶಾಲೆಗಳ ಪ್ರಾಂಶುಪಾಲಕ ಸಂಘದ ಅಧ್ಯಕ್ಷ ರಂಗನಾಥ್, ಗೌರವ ಅಧ್ಯಕ್ಷೆ ವಸಂತ, ಜಿಲ್ಲಾ ಸಮನ್ವಯ ಅಧಿಕಾರಿ ಹೇಮ್ಕುಮಾರ್, ಪರಶುರಾಂ, ಜಿಲ್ಲೆಯ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಹಾಜರಿದ್ದರು. ನಂದಿನಿ ಸ್ವಾಗತಿಸಿದರು. ಶಿಲ್ಪ ಪ್ರಾರ್ಥಿಸಿದರು. ಪ್ರಸಾದ್ ನಿರೂಪಿಸಿದರು. ಸ್ವಾಮಿ ವಂದಿಸಿದರು.