ಮೈಸೂರು: ಮರಾಠ ಸಾಮ್ರಾಜ್ಯದ ಶಿವಾಜಿಯ ತಾಯಿಯಾದ ಜೀಜಾಬಾಯಿ ರೀತಿಯಲ್ಲಿ ನಮ್ಮ ಮಕ್ಕಳಿಗೂ ತಾಯಿಂದಿರು ಪ್ರೇರಣೆಯಾಗಬೇಕು. ನಮ್ಮ ಮಕ್ಕಳಲ್ಲಿ ಕೂಡ ದೇಶಭಕ್ತಿ, ರಾಷ್ಟ್ರಭಕ್ತಿ ಬೆಳೆಸಬೇಕು ಎಂದು ಆರ್.ಎಸ್.ಎಸ್. ಪ್ರಮುಖ್ ಮ.ವೆಂಕಟರಾಂ ಅಭಿಪ್ರಾಯಪಟ್ಟರು.
ಕರ್ನಾಟಕ ಕ್ಷತ್ರಿಯ ಒಕ್ಕೂಟ ಮಹಿಳಾ ಘಟಕ ಹಾಗೂ ಅಂಬಾಭವಾನಿ ಮಹಿಳಾ ಸಮಾಜ ವತಿಯಿಂದ ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಶಿವಾಜಿ ಅವರ ತಾಯಿ ಜೀಜಾಬಾಯಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಿಂದೂ ರಾಷ್ಟ್ರವಾಗಬೇಕೆಂಬ ಇರಾದೆ ಜೀಜಾಬಾಯಿಗಿತ್ತು. ಮುಸ್ಲಿಂ ದಾಳಿಕೋರರಿಂದ ನಮ್ಮ ಪ್ರಾಂತ್ಯ ಮುಕ್ತಿ ಪಡೆಯಬೇಕು. ಹಿಂದೂ ಸಾಮ್ರಾಜ್ಯ ಆಗಬೇಕು ಎಂಬ ಕನಸ, ಪರಿಕಲ್ಪನೆ ಜೀಜಾ ಬಾಯಿ ಅವರಲ್ಲಿತ್ತು. ಆದ್ದರಿಂದಲೇ ಮಗನಿಗೆ ಚಿಕ್ಕಂದಿನಿಂದಲೇ ಪೌರಾಣಿಕ ಕಥೆ, ಯಶೋಗಾಥೆ ಹೇಳಿ ಬೆಳೆಸಿದರು ಎಂದು ಸ್ಮರಿಸಿದರು.
ಬಿಜೆಪಿ ನಗರಾಧ್ಯಕ್ಷೆ ಹೇಮಾ ನಂದೀಶ್ ಮಾತನಾಡಿ, ವಿವೇಕಾನಂದರು ಮತ್ತು ಜೀಜಾಬಾಯಿ ದಿನಾಚರಣೆ ಒಂದೇ ದಿನ ಬಂದಿವೆ. ಇಬ್ಬರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು. ಹಿಂದೂ ಸ್ವರಾಜ್ ಕಲ್ಪನೆ ಮಗನ ಮೂಲಕ ಈಡೇರಿಸಿದ ತಾಯಿ ಜೀಜಾಬಾಯಿ. ನಾವು ಮಹಿಳೆಯರು ನಮ್ಮ ಮಕ್ಕಳಿಗೆ ಇಂತಹ ವಿಚಾರಗಳನ್ನು ತಿಳಿಸಬೇಕು ಎಂದು ಕರೆ ನೀಡಿದರು.
ಅಂಬಾಭವಾನಿ ಮಹಿಳಾ ಸಮಾಜ ಅಧ್ಯಕ್ಷರಾದ ಸವಿತಾ ಘಾಟ್ಕೆ ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರಲ್ಲಿದ್ದಂತ ಧರ್ಮ ಹಾಗೂ ದೇಶ ಪ್ರೇಮಕ್ಕೆ ಸಮಸ್ತ ಹಿಂದೂ ಧರ್ಮವೇ ಇವರನ್ನು ಗೌರವದಿಂದ ಪೂಜಿಸುವಂತಾಗಿದೆ. ಹಿಂದುತ್ವದ ಅರಿವನ್ನು ಮೂಡಿಸುವಲ್ಲಿ ಶಿವಾಜಿ ಮಹಾರಾಜರ ಹೋರಾಟ ನಮಗೆಲ್ಲ ದಾರಿದೀಪವಾಗಿದೆ ಎಂದರು. ಅವರ ಆದರ್ಶಮಯ ಗುಣಗಳನ್ನು ಅಳವಡಿಸಿಕೊಂಡು ನಡೆದಲ್ಲಿ ನಮ್ಮ ಜೀವನ ಸಾರ್ಥಕವಾದಂತೆ ಎಂದರು.
ಇದೇ ಸಂದರ್ಭದಲ್ಲಿ ಆರ್ ಎಸ್ ಎಸ್ ಮುಖಂಡರಾದ ಮಾ ವೆಂಕಟರಾಮ್ ಜಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮ ನಂದೀಶ್, ಸತ್ಯ ಫೌಂಡೇಶನ್ ಅಧ್ಯಕ್ಷರಾದ ಸತ್ಯಪ್ಪ,ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷರಾದ ಸವಿತಾ ಘಾಟ್ಕೆ, ವಕೀಲರಾದ ಶಿವರಾಜ್ ರಾವ್, ಯುವ ಕ್ಷತ್ರಿಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಣೇಶ್ ಲಾಲಿಗೆ, ಅರ್ಜುನ್ ಚೌಹಾನ್, ಸವಿತಾ ಚೌಹಾನ್, ಕೋಮಲ ಬಾಯ್, ಸುಷ್ಮಾ ಸಾಲಂಕೆ, ಕೃಷ್ಣಮೂರ್ತಿ ರಾವತ್, ಹಾಗೂ ಇನ್ನಿತರರು ಭಾಗವಹಿಸಿದ್ದರು.