News Kannada
Monday, February 06 2023

ಮೈಸೂರು

ಮೈಸೂರು: ಎರಡು ವರ್ಷಗಳ ಬಳಿಕ ಸುತ್ತೂರಿನಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ

Mysore/Mysuru: After two years, suttur will witness a grand jatra mahotsava
Photo Credit : By Author

ಮೈಸೂರು: ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈ ಬಾರಿ ಜ.18ರಿಂದ 23ರವರೆಗೆ ಆರು ದಿನಗಳ ಕಾಲ ನಡೆಯಲಿದ್ದು ಜಾತ್ರೆಗೆ ಸುತ್ತೂರು ನವವಧುವಿನಂತೆ ಸಿಂಗಾರಗೊಂಡಿದೆ. ಇಡೀ ಊರು ಜಾತ್ರೆಗೆ ಸಜ್ಜಾಗಿದ್ದು, ಜಾತ್ರೆ ಪ್ರಯುಕ್ತ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ.

ಕೊರೊನಾದಿಂದಾಗಿ ಎರಡು ವರ್ಷಗಳ ಕಾಲ ಸರಳವಾಗಿ ಜಾತ್ರೆ ನಡೆದಿತ್ತು. ಈ ಬಾರಿ ಎಂದಿನಂತೆ 6 ದಿನಗಳ ಕಾಲ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವೈಭವಯುತವಾಗಿ ನಡೆಯಲಿದೆ. ಜಾತ್ರೆಗೆ ಜ.18ರಂದು ಚಾಲನೆ ಸಿಗಲಿದ್ದು, 23ರಂದು ಜಾತ್ರೆ ಸಂಪನ್ನಗೊಳ್ಳಲಿದೆ.

ಜಾತ್ರೆ ಪ್ರಯುಕ್ತ ಜ.19ರಂದು ಸಾಮೂಹಿಕ ವಿವಾಹ, ಹಾಲ್ಹರವಿ ಉತ್ಸವ, 20ರಂದು ರಥೋತ್ಸವ, 21ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೋತ್ಸವ, 22ರಂದು ತೆಪ್ಪೋತ್ಸವ ಹಾಗೂ ವೀರಭದ್ರೇಶ್ವರ ಕೊಂಡೋತ್ಸವಗಳ ಜೊತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ಜರುಗಲಿವೆ.

ಈ ಕುರಿತು ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾಹಿತಿ ನೀಡಿದ್ದು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು, ಗಣ್ಯರು, ವಿವಿಧ ಮಠಗಳ ಮಠಾಧೀಶರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ವರ್ಷ 29ನೇ ರಾಜ್ಯಮಟ್ಟದ ಭಜನಾ ಮತ್ತು ಏಕತಾರಿ ಸ್ಪರ್ಧೆ ಏರ್ಪಡಿಸಿದ್ದು, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 700ಕ್ಕೂ ಹೆಚ್ಚು ಪುರುಷ, ಮಹಿಳಾ, ಮಕ್ಕಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಜಾತ್ರೆಯ ಪ್ರಮುಖ ಆಕರ್ಷಣೆಯಾದ ವಸ್ತುಪ್ರದರ್ಶನದಲ್ಲಿ ಕೈಗಾರಿಕೋತ್ಪನ್ನಗಳು, ಕೈಮಗ್ಗ, ಜವಳಿ, ಕರಕುಶಲ ಉತ್ಪನ್ನಗಳು, ಗ್ರಾಮೀಣ ಉತ್ಪನ್ನಗಳು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ತಯಾರಿಸಿದ ಗೃಹಬಳಕೆ ಉತ್ಪನ್ನಗಳು ಹಾಗೂ ಗುಡಿ ಕೈಗಾರಿಕೆ ವಸ್ತುಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ಜೆಎಸ್‌ಎಸ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 200ಕ್ಕೂ ಹೆಚ್ಚು ಶಿಕ್ಷಣ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳಿರುತ್ತವೆ. ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಮಹಿಳಾ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ವೈದ್ಯಕೀಯ ಹಾಗೂ ತಾಂತ್ರಿಕ ವಸ್ತುಪ್ರದರ್ಶನ ಇರಲಿದೆ.

ಜ. 18ರಂದು ಸೋಬಾನೆಪದ ಹಾಗೂ ರಂಗೋಲಿ ಸ್ಪರ್ಧೆ, 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ 21ರಂದು ಸ್ಥಳದಲ್ಲೇ ಚಿತ್ರ ಬರೆಯುವ ರಾಜ್ಯಮಟ್ಟದ ಸ್ಪರ್ಧೆ, ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ. ಜತೆಗೆ ಚಿತ್ರಸಂತೆಯನ್ನೂ ಆಯೋಜನೆ ಮಾಡಲಾಗಿದೆ. ಮನರಂಜನೆಗಾಗಿ ಜಾತ್ರೆಯ ಎಲ್ಲ ದಿನಗಳಲ್ಲಿ ದೋಣಿ ವಿಹಾರ ಏರ್ಪಡಿಸಲಾಗಿದೆ. ಜತೆಗೆ 20ರಿಂದ 22ರವರೆಗೆ ದೇಸಿ ಆಟಗಳನ್ನು ಆಯೋಜಿಸಲಾಗಿದೆ.

ಜ. 19ರಂದು ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಜಾತಿ-ಮತ ಭೇದವಿಲ್ಲದೆ ಸರ್ವಧರ್ಮಗಳ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಅಂತರ್ಜಾತಿ, ವಿಶೇಷ ಚೇತನರು ಹಾಗೂ ಹೊರ ರಾಜ್ಯಗಳ ವಧೂ-ವರರು ಸಹ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಬೆಳಗ್ಗೆ ಅಕ್ಕಪಕ್ಕದ ಗ್ರಾಮಗಳಲ್ಲಿ ಸ್ನೇಹ-ಸೌಹಾರ್ದ-ಶಾಂತಿ ಪ್ರಾರ್ಥನಾ ಸಂಚಲನದ ಪ್ರಭಾತ್ ಪೇರಿ ನಡೆಯಲಿದೆ.

See also  ಮೈಸೂರು: ದಸರಾ ಕವಿಗೋಷ್ಠಿಯ ಪೋಸ್ಟರ್ ಅನಾವರಣ

ಜ. 22ರಂದು ರಾಷ್ಟçಮಟ್ಟದ ನಾಡ ಕುಸ್ತಿ ಪಂದ್ಯಗಳು ನಡೆಯಲಿವೆ. ಈ ಬಾರಿ ಎರಡು ಮಾರ್‌ಪಿಟ್ ಕುಸ್ತಿಗಳಿರುತ್ತವೆ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಿಗೆ ಸುತ್ತೂರು ಕೇಸರಿ ಹಾಗೂ ಸ್ಥಳೀಯ ಉತ್ತಮ ಕುಸ್ತಿ ಸ್ಪರ್ಧೆ ವಿಜೇತರಿಗೆ ಸುತ್ತೂರು ಕುಮಾರ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 18ರಿಂದ 20ರವರೆಗೆ 3 ದಿನಗಳ ಕಾಲ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಸಲಹೆ, ಸೂಚನೆ ಹಾಗೂ ವಿವಿಧ ರೀತಿಯ ಕ್ಯಾನ್ಸರ್‌ಗಳ ಬಗ್ಗೆ ಪರೀಕ್ಷೆಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದೆ. ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಜಾತ್ರಾ ಮಹೋತ್ಸವದ ಎಲ್ಲಾ ದಿನಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಸಮಸ್ತ ಭಕ್ತರಿಗೆ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ 20 ಲಕ್ಷ ಜನ ಆಗಮಿಸುವ ನಿರೀಕ್ಷೆ ಇರುವುದರಿಂದ ಹೆಚ್ಚಿನ ಆಹಾರ ಸಾಮಗ್ರಿಗಳನ್ನು ತರಿಸಲಾಗಿದೆ. ಮಹಾ ದಾಸೋಹ ಸೇರಿದಂತೆ 5 ಕಡೆಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ, ವಿವಿಐಪಿ, ಸ್ವಯಂಸೇವಕರು, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲು ಸ್ಟೀಲ್ ತಟ್ಟೆಗಳನ್ನು ಬಳಸಲಾಗುತ್ತಿದೆ. ಪ್ರಸಾದ ವಿತರಿಸುವ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ದೂರದಿಂದ ಬರುವವರಿಗೆ ತಾತ್ಕಾಲಿಕ ಕುಟೀರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ದಾಸೋಹ ಸಮಿತಿ ಸಂಚಾಲಕ ಪ್ರೊ.ಸುಬ್ಬಪ್ಪ ತಿಳಿಸಿದರು.

ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಪ್ರತಿ ವರ್ಷದಂತೆ ಈ ಬಾರಿಯೂ ಆಧುನಿಕ ತಂತ್ರಜ್ಞಾನಾಧಾರಿತ ಕೃಷಿ ಮೇಳ ಆಯೋಜಿಸಲಾಗಿದೆ. ಒಂದು ಎಕರೆ ಕೃಷಿ ಬ್ರಹ್ಮಾಂಡ, ನೆರಳುಮನೆಯಲ್ಲಿ ಬೆಳೆದ ಹಲವಾರು ದೇಸಿ ಹಾಗೂ ವಿದೇಶಿ ತರಕಾರಿಗಳು, ಈ ವರ್ಷ ವಿಶೇಷವಾಗಿ ಸಿರಿಧಾನ್ಯ ಬೆಳೆಗಳ ಪ್ರಾತ್ಯಕ್ಷಿಕೆ, ಮಣ್ಣಿನ ಸವಕಳಿ ತಪ್ಪಿಸಲು ಹಾಗೂ ಔಷಧಿ ಬೆಳೆಯಾಗಿ ಲಾವಂಚ, ದ್ವಿದಳ ಧಾನ್ಯಗಳ ವಿವಿಧ ತಳಿಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರೈತರ ಅನುಕೂಲಕ್ಕಾಗಿ ನೂತನ ತಂತ್ರಜ್ಞಾನ ಡ್ರೋನ್ ಬಳಕೆ ಕುರಿತ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಸಮಗ್ರ ಬೆಳೆ ನಿರ್ವಹಣೆ, ವೈವಿಧ್ಯಮಯ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಹಸು, ಕುರಿ, ಮೇಕೆ, ಕೋಳಿಗಳ ದೇಸಿ ತಳಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ವರ್ಷ ವಿಶ್ವ ಸಿರಿಧಾನ್ಯ ವರ್ಷವಾದ್ದರಿಂದ ವಿಶೇಷವಾಗಿ ಸಿರಿಧಾನ್ಯ ಮೇಳ ಏರ್ಪಡಿಸಲಾಗಿದೆ. ಸಿರಿಧಾನ್ಯ ಬೆಳೆಗಳ ಪ್ರದರ್ಶನ, ಅದರಿಂದಾಗುವ ಉಪಯೋಗದ ಕುರಿತು ವಿವರ ಮಾಹಿತಿಗಳನ್ನು ನೀಡಲಾಗುತ್ತದೆ. ಸಿರಿಧಾನ್ಯ ತಿನಿಸುಗಳ ಸ್ಪರ್ಧೆ ಏರ್ಪಡಿಸಿದ್ದು, ಮನೆಯಲ್ಲೇ ತಯಾರಿಸಿಕೊಂಡು ಬರುವ ಉತ್ತಮ ಖಾದ್ಯಗಳಿಗೆ ಬಹುಮಾನ ನೀಡಲಾಗುವುದು. ಜತೆಗೆ 21ರಂದು ಸಿರಿಧಾನ್ಯಗಳ ಮಹತ್ವ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಕುರಿತು ವಿಚಾರಸಂಕಿರಣ ಏರ್ಪಡಿಸಲಾಗಿದೆ.

See also  ಆ.7ರಂದು ಮೈಸೂರು ದಸರಾ ಗಜಪಯಣಕ್ಕೆ ಚಾಲನೆ

ಜಾತ್ರೆಯಲ್ಲಿ ಪ್ರತಿ ವರ್ಷ ದನಗಳ ಪರಿಷೆ ಆಯೋಜಿಸಿ ಉತ್ತಮ ರಾಸುಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ಈ ಬಾರಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವ ಕಾರಣ ಜಿಲ್ಲಾಧಿಕಾರಿ ಆದೇಶದಂತೆ ದನಗಳ ಜಾತ್ರೆ ರದ್ದುಪಡಿಸಲಾಗಿದೆ. ಒಟ್ಟಾರೆಯಾಗಿ ಸುತ್ತೂರು ಜಾತ್ರೆಗೆ ಸರ್ವ ರೀತಿಯಲ್ಲಿ ಸನ್ನದ್ಧವಾಗಿದ್ದು, ಬುಧವಾರ(ಜ.18)ದಿಂದ ಜಾತ್ರೆಯ ರಂಗು ಇಡೀ ಗ್ರಾಮವನ್ನು ಆವರಿಸಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು