ಮೈಸೂರು: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಈ ಬಾರಿ ನಾವು 130ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಗಳಿಸುತ್ತೇವೆ. ಜೆಡಿಎಸ್ ನವರು, ಬಿಜೆಪಿಯವರು, ಬೇರೆ ಯಾರು ಏನೇ ಹೇಳಲಿ ಜನ ಬದಲಾವಣೆ ಮಾಡಬೇಕು, ಭ್ರಷ್ಟ ಬಿಜೆಪಿಯನ್ನು ಅಧಿಕಾರದಿಂದ ಕಿತ್ತುಹಾಕಬೇಕು ಎಂದು ತೀರ್ಮಾನ ಮಾಡಿದ್ದಾರೆ. ನಾವು ಈಗಾಗಲೇ ಸುಮಾರು 8 ರಿಂದ 9 ಜಿಲ್ಲೆಗಳಲ್ಲಿ ಯಾತ್ರೆ ಮಾಡಿದ್ದೇವೆ, 28ರ ವರೆಗೆ ಯಾತ್ರೆ ಮಾಡಿ ಸುಮಾರು 22 ಜಿಲ್ಲೆಗಳಿಗೆ ಹೋಗುತ್ತೇವೆ. ಈ ವೇಳೆ ಜನರ ಪ್ರತಿಕ್ರಿಯೆ ಚೆನ್ನಾಗಿದೆ, ಒಲವು ನಮ್ಮ ಕಡೆಗಿದೆ. ಹಾಗಾಗಿ ಕನಿಷ್ಠ 130 ಸೀಟುಗಳಲ್ಲಿ ನಾವು ಗೆಲ್ಲುತ್ತೇವೆ.
ನರೇಂದ್ರ ಮೋದಿ, ಜೆ.ಪಿ ನಡ್ಡಾ ಇವರು ಯಾರೇ ಬಂದರು ಕರ್ನಾಟಕದ ಮತದಾರರ ಮೇಲೆ ಪರಿಣಾಮ ಬೀರಲು ಆಗಲ್ಲ. ನಡ್ಡಾ ಯಾರು? ಅವರು ನಮಗೇನು ಮಾಡಿದ್ದಾರೆ? ಡಬ್ಬಲ್ ಇಂಜಿನ್ ಸರ್ಕಾರ ಇದ್ದರೂ ರಾಜ್ಯಕ್ಕೆ ಮೋದಿ ಅವರು ಏನು ಮಾಡಿದ್ದಾರೆ? ನಾವು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳನ್ನು ಜನ ನೋಡಿದ್ದಾರೆ, ನಾವು ನುಡಿದಂತೆ ನಡೆದವರು. ಜನ ನಮ್ಮ ಮಾತನ್ನು ನಂಬುತ್ತಾರೆ. ನಾವು ಅಧಿಕಾರಕ್ಕೆ ಬಂದರೆ ಉಚಿತವಾಗಿ 200 ಯುನಿಟ್ ವಿದ್ಯುತ್ ಕೊಡುತ್ತೇವೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ ರೂ. 2,000 ಕೊಡುತ್ತೇವೆ ಎಂದು ಹೇಳಿದ್ದೇವೆ. ಇನ್ನು ಮುಂದೆ ನಮ್ಮ ಪ್ರಣಾಳಿಕೆಯಲ್ಲಿ ಮಾಡುವ ಎಲ್ಲಾ ಘೋಷಣೆಗಳನ್ನು ಕೂಡ ಈಡೇರಿಸುತ್ತೇವೆ. ಈ ಹಿಂದಿನ ನಮ್ಮ ಪ್ರಣಾಳಿಕೆಯ 99% ಭರವಸೆಗಳನ್ನು ಈಡೇರಿಸಿದ್ದೆವು, ಮುಂದೆಯೂ ಈಡೇರಿಸುತ್ತೇವೆ. ಜನರ ನಂಬಿಕೆ, ವಿಶ್ವಾಸವನ್ನು ನಾವು ಉಳಿಸಿಕೊಂಡಿದ್ದೇವೆ.
ಕೋಲಾರಕ್ಕೆ ಬಿ.ಎಲ್ ಸಂತೋಷ್, ಅಮಿತ್ ಶಾ, ನಡ್ಡಾ, ನರೇಂದ್ರ ಮೋದಿ ಯಾರಾದರೂ ಬರಲಿ ನಾನು ಗೆದ್ದೇ ಗೆಲ್ಲುತ್ತೇನೆ. ಬಾದಾಮಿಯಲ್ಲಿ ಅಮಿತ್ ಶಾ ಅವರು ರಾಮುಲು ಅವರನ್ನು ಕರೆದುಕೊಂಡು ಹೋಗಿ ನನ್ನ ವಿರುದ್ಧ ನಿಲ್ಲಿಸಿದ್ರು. ಸಾಮಾನ್ಯವಾಗಿ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ಕೊಡಬೇಕಾಗಿತ್ತು, ಆದರೆ ನನ್ನನ್ನು ಸೋಲಿಸುವ ಉದ್ದೇಶದಿಂದ ರಾಮುಲು ಅವರಿಗೆ ಟಿಕೇಟ್ ಕೊಟ್ಟರು. ನಾನು ಬಾದಾಮಿಗೆ ಹೋಗಿದ್ದು ಎರಡೇ ದಿನ. ಒಂದಿನ ನಾಮಿನೇಷನ್ ಹಾಕೋಕೆ, ಇನ್ನೊಂದಿನ ಓಟು ಕೇಳೋಕೆ ಹೋಗಿದ್ದೆ. ಬಾದಾಮಿಯಲ್ಲಿ ಬಿಜೆಪಿಯವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರು, ಗೆದ್ರಾ? ಕೋಲಾರದಲ್ಲೂ ಅವರು ಗೆಲ್ಲಲ್ಲ.
ನಾನು ಬಾದಾಮಿಯಲ್ಲಿ ಸೋಲುತ್ತೇನೆ ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲ್ಲ ಎಂದು ಹೇಳುತ್ತಿರುವುದಲ್ಲ. ಬಾದಾಮಿ ಜನ ಹೆಲಿಕಾಪ್ಟರ್ ಕೊಡುಸ್ತೇವೆ ಬನ್ನಿ ಎಂದು ಕರೆಯುತ್ತಿದ್ದಾರೆ. ಬಾದಾಮಿ ತುಂಬಾ ದೂರವಾಯ್ತು, ನನಗೂ ವಯಸ್ಸಾಗ್ತಾ ಇದೆ, ದೂರ ಇದ್ದರೆ ಪದೇ ಪದೇ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳೋಕೆ ಆಗಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರ ಹತ್ತಿರದಲ್ಲಿದ್ದರೆ ಹೆಚ್ಚು ಕೆಲಸ ಮಾಡಬಹುದು. ಅದಕ್ಕೆ ಹತ್ತಿರದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು.
ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರು ಜೈಲಿಗೆ ಹೋಗಿದ್ದು ಯಾಕೆ? ಇಲ್ಲಿ ಏನು ಅಕ್ರಮವೇ ನಡೆದಿಲ್ಲ ಎನ್ನುವುದಾದರೆ ಅವರು ಜೈಲಿಗೆ ಹೋಗಿದ್ದು ಯಾಕೆ? ಸುಮ್ಮ ಸುಮ್ಮನೆ ಜೈಲಿಗೆ ಹೋಗ್ತಾರ? ನರೇಂದ್ರ ಮೋದಿ ಅವರು ಸರ್ಟಿಫಿಕೇಟ್ ಕೊಡಬೇಕಾದ ಅಗತ್ಯ ಇಲ್ಲ. ಕಾನೂನು ಏನು ಹೇಳುತ್ತದೆ ಅದು ಮುಖ್ಯ. ಅಕ್ರಮ ನಡೆಯದೇ ಇದ್ದರೆ ಬಹಳಷ್ಟು ಜನ ಜೈಲಿಗೆ ಹೋಗಿದ್ದು ಯಾಕೆ? ಇನ್ನು ಅವರೆಲ್ಲ ಜೈಲಲ್ಲಿ ಯಾಕಿದ್ದಾರೆ?
ಸ್ಯಾಂಟ್ರೋ ರವಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ವಿಚಾರಣೆ ಮಾಡಿದರೆ ತಮ್ಮ ಬಣ್ಣ ಬಯಲಾಗುತ್ತೆ ಎಂದು ಸರ್ಕಾರ ಅವನ ರಕ್ಷಣೆ ಮಾಡುತ್ತಿದೆ. ಸ್ಯಾಂಟ್ರೋ ರವಿ ಒಬ್ಬ ಕುಖ್ಯಾತ ಕ್ರಿಮಿನಲ್. ಆತ ಅತ್ಯಾಚಾರ ಪ್ರಕರಣದಲ್ಲಿದ್ದಾನೆ, ಪಿಂಪ್ ಆಗಿ ಕೆಲಸ ಮಾಡಿದ್ದಾನೆ, ವರ್ಗಾವಣೆ ದಂಧೆಯಲ್ಲಿದ್ದಾನೆ, ಫೋಕ್ಸೋ ಪ್ರಕರಣದಲ್ಲಿದ್ದಾನೆ. ಇಷ್ಟೆಲ್ಲಾ ಇದ್ದರೂ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಯಾಕೆ ಮಾಡಿಲ್ಲ?
ಕೇಸ್ ಸಿಐಡಿಗೆ ವರ್ಗಾವಣೆ ಆಗಿದ್ದರೆ ಆತನನ್ನು ವಿಚಾರಣೆಗೆ ವಿಳಂಬವಾಗಿ ಪಡೆದಿದ್ದು ಯಾಕೆ? ಸಿಐಡಿ ಅವರು ಯಾರ ಕೈಕೆಳಗೆ ಕೆಲಸ ಮಾಡೋದು? ಸಿಐಡಿ ಒಂದು ಸ್ವತಂತ್ರ ಇಲಾಖೆ ಅಲ್ಲ, ಪೊಲೀಸ್ ಇಲಾಖೆಯ ಇನ್ನೊಂದು ವಿಭಾಗ ಅಷ್ಟೆ. ಈ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ.