ಮೈಸೂರು: ವಿಧಾನಸಭೆ ಚುನಾವಣೆಗೆ 90 ದಿನಗಳಷ್ಟೇ ಬಾಕಿಯಿದ್ದು, ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಪಡೆದವರು ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸಲಹೆ ನೀಡಿದರು.
ಮೈಸೂರು ಜಿ ಕಾಂಗ್ರೆಸ್ ಸಮಿತಿ ಸೇವಾದಳ ಸಮಿತಿ ಜಿಲ್ಲಾಧ್ಯಕ್ಷ ಹುಣಸೂರು ಕ್ಷೇತ್ರದ 3 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಮತ್ತು ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆಗೆ ಪ್ರಾಮುಖ್ಯತೆ ಕೊಡುತ್ತಿಲ್ಲ. ಸಂಸದರು, ಶಾಸಕರು ಗುದ್ದಲಿ ಪೂಜೆ, ವಿವಾಹ, ಸಾವುಗಳಿಗೆ ಹೋಗಬೇಕಾಗುತ್ತದೆ. ಕೆಲಸದ ಒತ್ತಡವೂ ಇರುತ್ತದೆ. ಎಷ್ಟೇ ಒತ್ತಡವಿದ್ದರೂ ಆಡಳಿತ ಮತ್ತು ಪಕ್ಷ ಸಂಘಟನೆಯನ್ನು ತಕ್ಕಡಿಯಂತೆ ಸಮನಾಗಿ ತೂಗಬೇಕು ಎಂದು ಹೇಳಿದರು.
1923ರಲ್ಲಿ ಡಾ.ಹರ್ಡೀಕರ್ ಸೇವಾದಳ ಆರಂಭಿಸಿದರು. ಸ್ವಾತಂತ್ರ್ಯ ಹೋರಾಟ, ಪ್ಲೇಗ್, ಕಾಲಾರ ಬಂದಾಗ ಸೇವಾದಳ ಸದಸ್ಯರು ಮುಂದೆ ನಿಂತು ಕೆಲಸ ಮಾಡಿದರು. ಇವತ್ತು ಅಖಿಲ ಭಾರತ ಮಟ್ಟದಿಂದಲೂ ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿಲ್ಲ. ವಿದ್ಯಾರ್ಥಿ ಸಂಘಟನೆ, ಮಹಿಳಾ ಕಾಂಗ್ರೆಸ್‌ಗೆ ನೀಡುತ್ತಿರುವ ಆದ್ಯತೆ ಸಿಗುತ್ತಿಲ್ಲ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಸಂಚಾಲಕರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚು ಕೆಲಸ ಮಾಡಬೇಕು. ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಕಾರ್ಯಕ್ರಮಕ್ಕೆ ಅಮಿತ್ ಶಾ ಬಂದು ಹೋಗಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ಸಂಘಟನೆಗಳಿಗಿಂತಲೂ ಹೆಚ್ಚು ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. 2014ರ ಸಂಸತ್ ಚುನಾವಣೆಯಲ್ಲಿ 1.40 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸಿದ್ದೇವೆ. ಅತಿಯಾದ ಆತ್ಮವಿಶ್ವಾಸದಿಂದ 2019ರ ಚುನಾವಣೆಯಲ್ಲಿ 1700ಮತಗಳಿಂದ ಸೋಲಬೇಕಾಯಿತು. ಹಾಗಾಗಿ ಮುಂಬರುವ ಚುನಾವಣೆ ಗಂಭೀರವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನೂರು ಜನರಿಗೆ ಆದೇಶ ಕೊಡಬಹುದು. ಬೂತ್ ಸಮಿತಿಗಳನ್ನು ರಚಿಸಬೇಕು. ಬಿಎಲ್‌ಎ2 ನೇಮಕ ಮಾಡಿ ಕೆಪಿಸಿಸಿ ವೆಬ್‌ಸೈಟ್‌ಗೆ ದಾಖಲಿಸಬೇಕು. ಪ್ರತಿ ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಣೆ ಮಾಡಬೇಕು. ವ್ಯಾಟ್ಸಾಪ್ ಗ್ರೂಪ್ ರಚಿಸಿ, ಗುರುತಿನ ಚೀತಿಯನ್ನು ನೀಡಬೇಕು ಎಂದು ಮುಖಂಡರಿಗೆ ಹೇಳಿದರು.