ನಂಜನಗೂಡು: ರೈತರಿಗೆ ಭೂ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ತಾಲೂಕಿನ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ರೈತರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ಮಾತನಾಡಿದ ಅವರು, ತಾಲೂಕಿನ ಅರ್ಹ ಭೂ ಉಳುಮೆ ಮಾಡುತ್ತಿರುವ ರೈತ ಬಾಂಧವರಿಗೆ ಭೂ ಮಂಜೂರಾತಿ ಶೀಘ್ರವಾಗಿ ಆಗಲೇಬೇಕು. ಖಾತೆ ಮಾಡದೆ ಉಳಿದಿರುವ ಅರ್ಜಿಗಳನ್ನು ಕೂಡಲೇ ಖಾತೆ ಮಾಡಿಸಿಕೊಡಬೇಕು ಕೆಲವು ಅನರ್ಹರಿಗೆ ದೊಡ್ಡ ದೊಡ್ಡ ಉದ್ಯೋಗದಲ್ಲಿರುವವರಿಗೆ ಭೂ ಮಂಜೂರಾತಿ ಮಾಡಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಾಲೂಕು ಕಚೇರಿಯಲ್ಲಿ ಭೂ ಮಂಜೂರಾತಿಗೆ ಹಾಗೂ ಇತರೆ ಕೆಲಸ ಕಾರ್ಯಗಳನ್ನು ವಿಳಂಬ ಮಾಡುತ್ತಿದ್ದು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.
ತಹಶೀಲ್ದಾರ್ ಶಿವಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಶಿವಣ್ಣ, ತಾಲೂಕು ಉಪಾಧ್ಯಕ್ಷರಾದ ನಾಗರಾಜು, ಎಸ್.ದೊಡ್ಡಯ್ಯ, ಮಹೇಶ್, ಸೇರಿದಂತೆ ರೈತರು ಭಾಗವಹಿಸಿದರು.