ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಮೂಡಹಳ್ಳಿ ಗ್ರಾಮದಲ್ಲಿ ನಮ್ಮೂರ ಕೆರೆ ನುಂಗಣ್ಣರ ಪಾಲಾಗಿದೆ. ಚಿಕ್ಕಯ್ಯನ ಛತ್ರ ಹೋಬಳಿ ವ್ಯಾಪ್ತಿಯ ಮೂಡಹಳ್ಳಿ ಗ್ರಾಮದ ಸರ್ವೇ ನಂಬರ್ 161 ರಲ್ಲಿ ಆರ್.ಟಿಸಿಯಲ್ಲಿ ಸರ್ಕಾರಿ ಬೀಳು 16 ಗುಂಟೆ ಎಂದು ಬರುತ್ತಿದೆ. ಎರಡು ವರ್ಷಗಳ ಹಿಂದಷ್ಟೇ ಕೆರೆ ಇದ್ದ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೆ ಅಧಿಕಾರಿಗಳು ಶಾಮೀಲಾಗಿ ಕೆರೆಯನ್ನು ನೆಲಸಮ ಮಾಡಿಸಿ ಪ್ರಭಾವಿ ವ್ಯಕ್ತಿಗಳಿಗೆ ಬೆಳೆ ಬೆಳೆಯಲು ಬಿಟ್ಟುಕೊಟ್ಟಿದ್ದಾರೆ.
ಈ ಬಗ್ಗೆ ಧ್ವನಿ ಎತ್ತಿರುವ ದಲಿತ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಕೆರೆಯನ್ನು ನಿರ್ಮಾಣ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕೆರೆಯನ್ನು ನೆಲಸಮ ಮಾಡಿ ಬೆಳೆ ಬೆಳೆದಿರುವ ಬಗ್ಗೆ ನಂಜನಗೂಡು ತಾಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಬೊಕ್ಕಹಳ್ಳಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆಯ ಕಡೆ ಕಾರ್ಯಕ್ರಮದಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯರವರ ಸಮ್ಮುಖದಲ್ಲಿ ದೂರು ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಭೂಮಿಯಲ್ಲಿ ಮೂಡಹಳ್ಳಿ ಗ್ರಾಮದ ಕಾಮಿಕಟ್ಟೆ ಕೆರೆಯೆಂದು ಇದನ್ನು ಕರೆಯುತ್ತಿದ್ದರು. ಕಳೆದೆರಡು ವರ್ಷಗಳ ಹಿಂದೆ ಪ್ರಭಾವಿ ವ್ಯಕ್ತಿಗಳಿಂದ ಕೆರೆ ಒತ್ತುವರಿ ಮಾಡಿಕೊಂಡು ಭತ್ತದ ಬೆಳೆಯನ್ನು ಬೆಳೆಯಲಾಗಿದೆ.
ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದು ಇದೇ ತರಹ ಚಿಕ್ಕಯ್ಯನ ಚಿತ್ರ ಹೋಬಳಿ ವ್ಯಾಪ್ತಿಯಲ್ಲಿ ಸಾಕಷ್ಟು ಕೆರೆಗಳು ಮಾಯವಾಗಿವೆ ಎಂದು ಆರೋಪ ಮಾಡಿದ್ದಾರೆ.
ಕೆರೆ ಕಟ್ಟೆಗಳನ್ನು ಬಿಡಿಸಿ ಜನ ಜಾನುವಾರುಗಳಿಗೆ ಮತ್ತು ಅಂತರ್ಜಲ ಹೆಚ್ಚಲು ಅನುಕೂಲವಾಗುತ್ತದೆ ಆದ್ದರಿಂದಲೇ ಹಿರಿಯರು ಕೆರೆಕಟ್ಟೆಗಳನ್ನು ನಿರ್ಮಿಸಿದರು.
ಈ ಕೂಡಲೇ ನೆಲಸಮವಾಗಿರುವ ಕೆರೆಯನ್ನು ಬಿಡಿಸಿ ಕೆರೆ ನಿರ್ಮಾಣ ಮಾಡಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ದಲಿತ ಸಂಘರ್ಷ ಸಮಿತಿಯ ಮೂಡಹಳ್ಳಿ ಮಹಾದೇವಸ್ವಾಮಿ ಹಾಗೂ ಶಿವರಾಜು ಸೇರಿದಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.