ಮೈಸೂರು: ಕಾಶಿಗೌ ಕಾವ್ಯ ನಾಮದ ಕಾಡ್ನೂರು ಶಿವೇಗೌಡರ ಕಾವ್ಯ ಕೃಷಿ ಕಲ್ಪನೆಗಿಂತ ವಾಸ್ತವಕ್ಕೆ ಬಹಳ ಹತ್ತಿರವಾಗಿದ್ದು ಅವರ ಪ್ರತಿಯೊಂದು ಕವಿತೆಗಳು ಅನುಭವ ಜನ್ಯವಾಗಿವೆಯೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.
ನಗರದ ಪುಶಿನಾ ಪ್ರಕಾಶನದ ವತಿಯಿಂದ ದೇವರಾಜ ಮೊಹಲ್ಲಾದಲ್ಲಿರುವ ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಾರದಾ ಪೂಜೆ ಮತ್ತು ಪರೀಕ್ಷಾರ್ಥಿಗಳಿಗೆ ಪ್ರವೇಶ ಪತ್ರ ವಿತರಣೆ ಹಾಗೂ ಪಂಚ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರೂ ಆದ ಕವಿ ಕಾಡ್ನೂರು ಶಿವೇಗೌಡರ ಮನದ ಮಲ್ಲಿಗೆ, ಅಂತರಂಗ ಚಿಗುರು, ಅರಳಿದ ಭಾವ, ಕಾಡ್ನೂರು ರಗಳೆ, ಬೆಳಗು ಕಿರಣ, ಸೇರಿದಂತೆ ಐದು ಕವನ ಸಂಕಲಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಉಪನ್ಯಾಸಕರಾಗಿ, ಬೋಧಕರಾಗಿ, ಪ್ರಾಂಶುಪಾಲರಾಗಿ ಕಳೆದ ಸುಮಾರು ಮೂರುವರೆ ದಶಕಗಳಿಂದಲೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿವೇಗೌಡರ ಈ ಐದೂ ಕವನ ಸಂಕಲನಗಳು ಅವರ ಜೀವನಾನುಭವದ ಮೂಸೆಯಲ್ಲಿ ಅರಳಿರುವ ಬಹುಮುಖಿ ವಿಷಯಗಳ ಬಹು ಮೌಲಿಕ ಕೃತಿಗಳಾಗಿವೆ ಎಂದರು.
ಸರಳ, ಸಜ್ಜನಿಕೆಯ, ಜನೋಪಯೋಗಿ ವ್ಯಕ್ತಿತ್ವದ ಶಿವೇಗೌಡರ ಒಡಲು ಕಾವ್ಯದ ಕಡಲಾಗಿದ್ದು ಇಷ್ಟು ವರ್ಷಗಳಿಂದಲೂ ಅವರೊಳಗೆ ಗುಪ್ತವಾಗಿ ತುಂಬಿ ತುಳುಕುತ್ತಿದ್ದ ಕವಿತೆಗಳೆಲ್ಲವನ್ನೂ ಈಗ ಪ್ರಕಟಿಸಿ ಒಮ್ಮೆಗೇ ಹೊರ ಹಾಕಿದ್ದಾರೆ. ಪ್ರತಿಯೊಂದು ಕವನಗಳು ಒಂದಕ್ಕಿಂತ ಒಂದು ವಸ್ತು ವೈವಿಧ್ಯತೆಯಿಂದ ಚೆಂದವಾಗಿದ್ದು ಕನ್ನಡ ಕಾವ್ಯ ಲೋಕವನ್ನು ಬೆಳಗಲು ಈ ಪಂಚಕೃತಿಗಳ ಮೂಲಕ ಸಿದ್ಧವಾಗಿವೆ. ವೃತ್ತಿಯಲ್ಲಿ ಬೋಧಕರಾಗಿರುವ ಕವಿ ಶಿವೇಗೌಡರ ಕವಿತೆಗಳು ಸ್ವಾಸ್ಥ್ಯ ಸಮಾಜಕ್ಕೆ ನೆರವಾಗಬಲ್ಲವು. ನಿವೃತ್ತಿಯ ಅಂಚಿನಲ್ಲಿರುವ ಇವರು ನಿವೃತ್ತಿಯ ನಂತರ ಸಾಹಿತ್ಯ ಕೃಷಿಯನ್ನು ವೃತ್ತಿ ಮಾಡಿಕೊಂಡರೆ ಖಂಡಿತವಾಗಿಯೂ ಕಾಶಿಗೌ ಅವರು ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ಆಸ್ತಿಯಾಗಬಲ್ಲರೆಂದ ಅವರು, ಅಂತಹ ಕಾವ್ಯ ಶಕ್ತಿ ಕವಿ ಶಿವೇ ಗೌಡರಲ್ಲಿದೆ ಎಂಬುದಕ್ಕೆ ಪ್ರಸ್ತುತ ಲೋಕಾರ್ಪಣೆಗೊಂಡಿರುವ ಅವರ ಪಂಚ ಕವನ ಸಂಕಲನಗಳೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಜ್ಯೋತಿ ಬೆಳಗುವುದರ ಮೂಲಕ ಶಾರದಾ ಪೂಜೆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಎಂ.ಪ್ರಮೀಳಾ ಭರತ್ ಅವರು, ಸ್ವಾಮಿ ವಿವೇಕಾನಂದರು ಹೇಳಿರುವಂತೆ ನಿಮ್ಮ ಬಾಳಿಗೆ ನೀವೇ ಶಿಲ್ಪಿಗಳು. ಇಂಥಾ ಸ್ಪೂರ್ತಿದಾಯಕ ನುಡಿಗಳನ್ನು ಅರಿತು ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದು ಹೇಳಿ ಪರೀಕ್ಷಾರ್ಥಿಗಳಾದ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರಲ್ಲದೆ ಪಂಚ ಕಾವ್ಯ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಪ್ರಾಂಶುಪಾಲ ಶಿವೇಗೌಡರ ಕಾವ್ಯ ಪ್ರತಿಭೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ಮೈಸೂರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗಮಲ್ಲೇಶ್ ಅವರು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ನೀಡಿದರು. ನಂತರ ಮಾತನಾಡಿದ ಅವರು ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಇವತ್ತಿನ ಸಮಾಜವನ್ನು ಅರಿತು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಬೇಕೆಂದರೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ. ಹಾಗಾಗಿ ವಿದ್ಯಾರ್ಥಿನಿಯರು ಚೆನ್ನಾಗಿ ಅಧ್ಯಯನ ಮಾಡಿ ಓದಿದ್ದನ್ನು ಸರಿಯಾಗಿ ಅರ್ಥೈಸಿಕೊಂಡು ಪರೀಕ್ಷೆಯಲ್ಲಿ ಬರೆಯಬೇಕೆಂದು ಕಿವಿಮಾತು ಹೇಳಿದರು.
ಮಹಾಜನ ಕಾಲೇಜಿನ ಉಪನ್ಯಾಸಕ ಡಾ.ಎಚ್.ಎಂ.ಸ್ವಾಮಿಗೌಡ ಅವರು ಪಂಚ ಕೃತಿಗಳನ್ನೂ ಕುರಿತು ಸವಿವರವಾಗಿ ಮಾತನಾಡಿ ಕೃತಿಗಳ ಮೌಲ್ಯಕ್ಕೆ ಕನ್ನಡಿ ಹಿಡಿದರು. ಕೃತಿಗಳ ಕರ್ತೃ ಪ್ರಾಶುಂಪಾಲ ಕಾಡ್ನೂರು ಶಿವೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವಿಘ್ನೇಶ್ವರ ವಿ. ಭಟ್ಟ, ಫೋಟೋ ರಾಜಗೋಪಾಲ್, ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಾದ ಡಾ.ರಮಾನಂದ್, ಸುದೀಪ್, ಶಿವಕುಮಾರ್, ಆನಂದ್, ಕೃಷ್ಣ, ಕೋಟೆ ವೆಂಕಟೇಶ್, ಎಂ.ವಿ. ಸುನೀತಾ, ಉಷಾ ಎಸ್. ಗೋಂದಳಿ, ಡಾ.ವಿ.ಶ್ರೀಮತಿ, ಡಿ.ಪ್ರಭಾವತಿ, ಎ.ಬಿ. ಸಬಿತಾ, ಎಂ.ಕೆ. ರಾಧಾ, ಸುಶೀಲಾ ವಿ.ಭಟ್ ಕುರ್ಸೆ, ವಿ.ಆನಂದ ಕುಮಾರ್, ಟಿ.ಎಂ.ನಾಗೇಶ್, ಪುಷ್ಪಲತಾ, ಎ.ಎಸ್.ಜಗದೀಶ್, ಎಂ.ಬಾಲರಾಜು ಇನ್ನಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಉಪನ್ಯಾಸಕ ಆನಂದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.