ಮೈಸೂರು: ಪ್ರತಿಯೊಬ್ಬರ ಬದುಕಿನಲ್ಲೂ ಹುಟ್ಟಿನೊಡನೆಯೇ ಕರುಳ ಸಂಬಂಧಿಯಾಗಿ ಬೆಸೆದುಕೊಂಡು ರಕ್ತಗತವಾಗಿ ಹರಿದು ಬಂದಿರುವ ಮಾತೃಭಾಷೆ ಎಂಬುದು ಜೀವದ ಭಾಷೆಯಾಗಿದ್ದು, ಜೀವನದ ಭಾಷೆಯೂ ಆಗೊದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನ ಹಂಪಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೈಸೂರಿನ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದಿಂದ ಏರ್ಪಡಿಸಿದ್ದ ವಿಶ್ವ ಮಾತೃ ಭಾಷಾ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಸಾವಿರಾರು ಭಾಷೆಗಳಿರಬಹುದಾದರೂ ಮಾತೃಭಾಷೆಗೆ ಸಮ ಮತ್ತೊಂದಿಲ್ಲ ಎಂದರು.
ಹುಟ್ಟಿನಿಂದ ಸಾವಿನ ತನಕವೂ ಮಾತೃಭಾಷೆ ನಮ್ಮ ಜೊತೆಯಲ್ಲಿ ಇರುತ್ತದೆ.ಇಂತಹ ತಾಯಿ ನುಡಿ ಯನ್ನು ಯಾರೂ ಮರೆಯುವಂತಿಲ್ಲ. ಒಂದು ಪಕ್ಷ ಮರೆತರೆ ಹೆತ್ತವ್ವನನ್ನು ಮರೆತಂತೆ. ಆದ್ದರಿಂದ ಪ್ರತಿಯೊಬ್ಬರೂ ಮಾತೃಭಾಷೆಗೆ ಆದ್ಯತೆ ಕೊಟ್ಟು ಅದನ್ನು ತಾಯಿಯಂತೆ ಪ್ರೀತಿಸಿ ಪೋಷಿಸಬೇಕು.ಇಂದು ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ, ಭೂಮಾಲಿನ್ಯ, ಪರಿಸರ ಮಾಲಿನ್ಯದಂತೆ ಮನುಷ್ಯನ ಮನೋಮಾಲಿನ್ಯದಿಂದಾಗಿ ಭಾಷಾ ಮಾಲಿನ್ಯವೂ ಆಗುತ್ತಿದೆ. ಹಾಗಾಗಿ ನಮ್ಮ ಮಾತೃಭಾಷೆ ಕನ್ನಡ ಮಾಲಿನ್ಯ ವಾಗದಂತೆ ಪರಿಶುದ್ಧ ಕನ್ನಡವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ವಿಶ್ವ ಮಾತೃಭಾಷಾ ದಿನದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಚಿತ್ರಕಲೆಯಲ್ಲಿ ರಕ್ಷಿತಾ (ಪ್ರ), ಸುಪ್ರೀತಾ (ದ್ವಿ), ಮದನ್ (ತೃ ), ಭಾಷಣ ಸ್ಪರ್ಧೆಯಲ್ಲಿ ಲಕ್ಷ್ಮಿ (ಪ್ರ), ರಶ್ಮಿಕಾ (ದ್ವಿ), ಸೌಪರ್ಣಿಕಾ (ತೃ), ರಂಗೋಲಿ ಸ್ಪರ್ಧೆಯಲ್ಲಿ ಪ್ರತಿಭಾ (ಪ್ರ),ನಾಗು (ದ್ವಿ), ತರುಣ್ (ತೃ) ಅವರುಗಳಿಗೆ ಎ.ಸಂಗಪ್ಪ ಅವರು ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಪ್ರೌಢಶಾಲಾ ಶಿಕ್ಷಕರಾದ ರಾಜು ಶೆಟ್ಟಿ ಅವರು ವಿಶ್ವಮಾತೃಭಾಷಾ ದಿನದ ಮಹತ್ವ ಹಾಗೂ ಮಾತೃಭಾಷೆಯ ಮಹತ್ತಿನ ಬಗ್ಗೆ ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಿಕೊಟ್ಟರು. ಪ್ರಾರಂಭದಲ್ಲಿ ಮುಖ್ಯ ಶಿಕ್ಷಕ ಜಿ. ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸುನೀತಾ, ಶಿಕ್ಷಕರಾದ ಎನ್. ವಿ. ಸುರೇಶ್, ಭುವನೇಶ್ವರಿ, ರಾಣಿ ಸೌಮ್ಯ, ಉಮಾ, ಹಾಗೂ ಮ್ಯಾಜಿಕ್ ಬಸ್ ಫೌಂಡೇಶನ್ ನ ಅಶ್ವಿತಾ ಮುಂತಾದವರು ಉಪಸ್ಥಿತರಿದ್ದರು.