ಮೈಸೂರು: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ಹೈವೇ ಉದ್ಘಾಟಿಸಲು ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದು, ಇದಕ್ಕೂ ಮೊದಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ ಏಲಿಕ್ಯಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಯಾಣಿಸುವರು. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸೂಕ್ತ ಭದ್ರತೆ ಮತ್ತು ಶಿಷ್ಟಾಚಾರ ಕಲ್ಪಿಸುವಂತೆ ವಿಶೇಷ ಭದ್ರತಾ ಪಡೆಯ (ಎಸ್.ಪಿ.ಜಿ) ಅಧಿಕಾರಿಗಳಾದ ಅಂಬರೀಷ್ ಉಪಾದ್ಯಾಯ ಅವರು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಮಂತ್ರಿಗಳು ಬೆಳಿಗ್ಗೆ 11.10 ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಹೆಲಿಕ್ಯಾಪ್ಟರ್ ಮೂಲಕ ಮಂಡ್ಯಕ್ಕೆ ತೆರಳುವರು. ಪುನಃ ಮಧ್ಯಾಹ್ನ 1.35 ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಹುಬ್ಬಳ್ಳಿಗೆ ತೆರಳುವರು. ಈ ಸಂದರ್ಭದಲ್ಲಿ ಅಗತ್ಯ ಭದ್ರತೆ ಒದಗಿಸುವುದು ಸ್ಥಳೀಯ ಪೊಲೀಸ್ ಇಲಾಖೆಯ ಜವಬ್ದಾರಿಯಾಗಿರುತ್ತದೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರಧಾನಮಂತ್ರಿಗಳನ್ನು ಸ್ವಾಗತಿಸಲು ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ಕೇಂದ್ರ ಮಂತ್ರಿಗಳು ಆಗಮಿಸುವರು. ಇವರಿಗೆ ಶಿಷ್ಟಾಚಾರ ಪಾಲನೆಯಾಗಬೇಕು. ಹತ್ತಿರದಲ್ಲಿ ವ್ಯವಸ್ಥಿತ ಆಸ್ಪತ್ರೆ ಗುರುತಿಸಿಕೊಂಡಿರಬೇಕು. 3 ಅಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಅನಿವಾರ್ಯ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ರಸ್ತೆ ಮೂಲಕ ಮಂಡ್ಯಕ್ಕೆ ಪ್ರಯಾಣ ಬೆಳೆಸುವ ಸಂದರ್ಭ ಉಂಟಾದರೆ ಈ ನಿಟ್ಟಿನಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.