ಮೈಸೂರು: ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ನಾನು ಕಾರಣ. ಇದು ನಿಜವಾದ ಕನಸು ಹಾಗೂ ಯೋಜನೆ ಮಾಡಿದವರು ನಾವು. ಆದರೆ ಈಗ ಅಪಪ್ರಚಾರ ಮಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಹೊರ ವಲಯದ ಸಿದ್ದಲಿಂಗಪುರ ಬಳಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಯನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರವರೆಗೂ ರಾಜ್ಯ ಹೆದ್ದಾರಿ ಆಗಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದುದ್ದನ್ನು ಮಾನದಂಡವಾಗಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಯಿತು. ಕೆಆರ್‌ಡಿಸಿಎಲ್ ಮೂಲಕ ನಾಲ್ಕು ಪಥವಾಗಿ ಮಾಡಿದರೂ ಒತ್ತಡ ಹೆಚ್ಚಾದ್ದರಿಂದ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಡಿಪಿಆರ್ ತಯಾರಿಸಲು ನಿರ್ಧರಿಸಲಾಯಿತು. 1,882 ಕಿಮೀ ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಮಾ.4ರಂದು 2014ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಬೊಗಳೆ ಬಿಡುವವರು ಆಗ ಸಂಸದರೇ ಆಗಿರಲಿಲ್ಲ. ಆಸ್ಕರ್ ಫರ್ನಾಂಡೀಸ್ ಕೇಂದ್ರದಲ್ಲಿ ಸಚಿವರಾಗಿದ್ದರು. ಅಭಿವೃದ್ಧಿ ಕೆಲಸ ಎಂಬುದು ಪಕ್ಷದ ಭಿಕ್ಷೆ ಅಲ್ಲ. ಯಾವುದೇ ವ್ಯಕ್ತಿ ಶಾಶ್ವತವೂ ಅಲ್ಲ. ನನ್ನ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎನ್ನುವವರಿಗೆ ಪರಿಜ್ಞಾನ ಇರಬೇಕು ಎಂದರು. ಕಾಮಗಾರಿಗಾಗಿ ರಾಮನಗರದಲ್ಲಿ ಕಚೇರಿ ತೆರೆದು 2ಸಾವಿರ ಎಕರೆ ಜಮೀನು ಸ್ವಾಧೀನಪಡಿಸಿಕೊಂಡೆವು. ಸರ್ವೇ ಮಾಡಿಸಿದೆವು. ತಾಂತ್ರಿಕ ವರದಿಯನ್ನೂ ಸಲ್ಲಿಸಿದೆವು. ಯೋಜನೆ ಜಾರಿಗೆ ನಮ್ಮ ಸರ್ಕಾರ ಕಾರಣ. ಇದೀಗ ಬಿಜೆಪಿ ತನ್ನದೆಂದು ಕ್ರೆಡಿಟ್ ತೆಗೆದುಕೊಳ್ಳುತ್ತಿದೆ ಎಂದು ಕಿಡಿ ಕಾರಿದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಾಮಗಾರಿ ನಡೆಸಲಾಗುತ್ತಿದೆ. 2014ರ ಮಾ.4 ರಂದು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲಾಯಿತು. ಈಗ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳಲು ಆರೇಳು ತಿಂಗಳು ಬೇಕು. ಸಿದ್ದಲಿಂಗಪುರದಲ್ಲಿ ಮೋರಿ ಇತ್ತು ಅದನ್ನು ಮುಚ್ಚಿ ರಸ್ತೆ ಮೇಲೆ ಮೋರಿ ನೀರು ಹರಿಯುವಂತೆ ಮಾಡಿದ್ದಾರೆ. ಮೈಸೂರು ಸಂಸದರಿಗೆ ಕೇವಲ ಏಳು ಕಿಮೀ ಮಾತ್ರವೇ ಬರುತ್ತದೆ. ಆದ್ದರಿಂದ ನರಿ ಬುದ್ಧಿ ಮಾತಾಡಬೇಡಿ. ರಾಜಕೀಯ ಭಾಷಣವನ್ನು ಸರಿಯಾಗಿ ಮಾಡಿ. ಕೆಲಸ ಮಾಡಿದವರನ್ನು ಶ್ಲಾಘಿಸಿ. ಟೀಕೆಯನ್ನು ಆರೋಗ್ಯಕರವಾಗಿ ಮಾಡಲಿ. ಸುಳ್ಳು ಹೇಳುವುದು ಹಾಗೂ ರಾಜಕೀಯ ಲಾಭ ಪಡೆಯುವುದನ್ನು ನಿಲ್ಲಿಸಲಿ ಎಂದು ಕಿಡಿ ಕಾರಿದರು.
ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಯೋಜನೆ ಮೊತ್ತ ಹೆಚ್ಚಾಗಿದೆ. ರೈತರಿಗೆ ಜಮೀನಿಗೆ ತೆರಳಲು ಅವಕಾಶ ನೀಡಿಲ್ಲ. ಚುನಾವಣೆ ಕಾರಣಕ್ಕೆ ತರಾತುರಿಯಲ್ಲಿ ಉದ್ಘಾಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ಜಯಕುಮಾರ್, ಜಿ.ವಿ.ಸೀತಾರಾಂ, ಮಾವಿನಹಳ್ಳಿ ಸಿದ್ದೇಗೌಡ, ಅಯೂಬ್ ಖಾನ್ ಮೊದಲಾದವರು ಇದ್ದರು.