ಸಾಲಿಗ್ರಾಮ: ಮೃತದೇಹದ ಶವಸಂಸ್ಕಾರ ಮಾಡಲು ಸ್ಥಳಾವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪರಿಶಿಷ್ಟ ಪಂಗಡದ ಜನತೆ ಶವವನ್ನು ರಸ್ತೆಯಲ್ಲಿಟ್ಟು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಗುರುವಾರ ಸಂಜೆ ಘಟನೆ ನಡೆದಿದೆ.
ನಾರಾಯಣಪುರ ಗ್ರಾಮದ ಮಾದನಾಯಕ ಎಂಬುವರ ಮಗ ಮಂಜುನಾಯಕ(55) ಎಂಬುವರು ಗುರುವಾರ ಮೃತಪಟ್ಟಿದ್ದು ಇವರ ಶವಸಂಸ್ಕಾರಕ್ಕೆಂದು ಕುಟುಂಬ ವರ್ಗದವರು ನಾರಾಯಣಪುರ ಗ್ರಾಮದ ಹೊರವಲಯದಲ್ಲಿ ಹಳ್ಳವನ್ನು ತೆಗೆದು ಶವ ಸಂಸ್ಕಾರಕ್ಕೆ ಸಿದ್ದಪಡಿಸಿದ್ದರು. ಅಷ್ಟರಲ್ಲಿ ಗ್ರಾಮದವರೇ ಆದ ಗ್ರಾ.ಪಂ.ಸದಸ್ಯ ಬಾಬು ಎಂಬುವವರು ಶವಸಂಸ್ಕಾರಕ್ಕೆಂದು ಹಳ್ಳ ತೋಡಿರುವ ಸ್ಥಳವು ಆಶ್ರಯ ನಿವೇಶನ ಹಂಚಿಕೆ ಮಾಡಲು ಮೀಸಲಿಟ್ಟಿರುವ ಜಾಗವಾಗಿದ್ದು ಅಲ್ಲಿ ಶವಶಂಸ್ಕಾರ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಾಲಸುಬ್ರಹ್ಮಣ್ಯ ಮತ್ತು ಪೋಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರೂ ಸಹ ಅವರು ಒಪ್ಪದೆ ಈಗಾಗಲೇ ಶವಸಂಸ್ಕಾರಕ್ಕೆಂದು ಹಳ್ಳ ತೆಗೆದಿರುವ ಜಾಗದಲ್ಲಿಯೇ ಅಂತ್ಯಕ್ರಿಯೆ ನಡೆಸುವುದಾಗಿ ಪಟ್ಟುಹಿಡಿದು ಕುಳಿತ ಕಾರಣ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೋಲೀಸರು ಪ್ರತಿಭಟನಾಕಾರರ ಮನವೊಲಿಸಲು ಎಷ್ಟು ಪ್ರಯತ್ನಪಟ್ಟರು ಶವದ ಅಂತ್ಯಕ್ರಿಯೆ ಅಲ್ಲಿಯೇ ನಡೆಸುವುದಾಗಿ ಪಟ್ಟುಹಿಡಿದು ರಸ್ತೆಯಲ್ಲೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಕಾರಣ ಪ್ರಯಾಣಿಕರು ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿ ಮೈಸೂರು-ಹಾಸನ ಹಾಗೂ ಕಪ್ಪಡಿ ಕ್ಷೇತ್ರಕ್ಕೆ ತೆರಳುವ ಪ್ರಯಾಣಕರು ಪರದಾಡುವಂತಾಯಿತು.
ಮೇಲ್ವರ್ಗದವರು ಹಿಂದುಳಿದ ವರ್ಗದವರಾದ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ಧಾರೆ ಶವಸಂಸ್ಕಾರಕ್ಕೆ ಸ್ಥಳಾವಕಾಶ ನೀಡದಿರುವುದು ಕಾನೂನುಬಾಹಿರವಾಗಿದೆ ಇಂತಹ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಮನವೊಲಿಕೆಗೆ ಒಪ್ಪದೆ ಪ್ರತಿಭಟನೆ ಮುಂದುವರೆಸಿದರು.
ಈ ನಡುವೆ ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ.ಸದಸ್ಯ ಬಾಬು ಪರಿಶಿಷ್ಟ ಪಂಗಡದವರ ಶವಸಂಸ್ಕಾರಕ್ಕೆಂದು ಗ್ರಾಮದಲ್ಲಿ ಬೇರೆ ಸ್ಥಳವನ್ನು ನಿಗದಿಮಾಡಲಾಗಿದ್ದು ಅವರು ಅಲ್ಲಿ ಬೇಡ ಇಲ್ಲಿಯೇ ಮಾಡಬೇಕೆಂದು ಪಟ್ಟು ಹಿಡಿದಿರುವುದು ಏಕೆ ಎಂದು ತಿಳಿಯುತ್ತಿಲ್ಲ ಎಂದು ತಮ್ಮ ಅಭಿಪ್ರಾಯ ಮಂಡಿಸಿ ಸ್ಥಳದಲ್ಲಿ ಶವಸಂಸ್ಕಾರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿ ಕೆಲವೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸರು ಶ್ರಮಪಡುವಂತಾಯಿತು.