ಮೈಸೂರು: ಎರಡು ರೌಡಿ ಶೀಟರ್‌ಗಳ ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಓರ್ವ ರೌಡಿ ಶೀಟರ್ ಕೊಲೆಯಾಗಿದ್ದರೆ, ಮತ್ತೊಬ್ಬ ರೌಡಿಶೀಟರ್ ಗಾಯಗೊಂಡಿರುವ ಘಟನೆ ನಡೆದಿದೆ.
ಕೊಲೆಯಾದ ರೌಡಿ ಶೀಟರ್ ಶ್ರೀಗಂಧ ಎಂದು ಗುರುತಿಸಲಾಗಿದ್ದು, ಈತ ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದ. ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ರೌಡಿಶೀಟರ್ ರವಿ, ಈತನ ಸ್ನೇಹಿತರಾದ ಮುಜೀಬ್ ಹಾಗೂ ಹರೀಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ರವಿ ಕೆ.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಕೊಲೆ ಪ್ರಕರಣದ ಕುರಿತು ಕೆಆರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
ಕೆಆರ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್.ಇ.ಗಂಗಾಧರ್ ಸ್ವಾಮಿ ನೇತೃತ್ವದಲ್ಲಿ ನಡೆದ ಈ ಪತ್ತೆ ಕಾರ್ಯದಲ್ಲಿ ಇನ್ಸ್‌ಪೆಕ್ಟರ್ ಮಹೇಶ್ ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.