ಮೈಸೂರು: ಜನರ ಆತ್ಮಸ್ಥೈರ್ಯ ತುಂಬುವ ರಚನಾತ್ಮಕ ಕಾರ್ಯಕ್ರಮಗಳು ನಿಮ್ಮ ಬಳಿಯಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಸಮಾಧಿ ಮಾಡುತ್ತಿದ್ದೀರಿ. ಪ್ರಧಾನಿಯೊಬ್ಬರು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳು ಸರಿಯಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಹಾವೇರಿ ಸೇರಿದಂತೆ ರಾಜ್ಯದ 10 ಜಿಲ್ಲೆಗಳನ್ನು ಬಡತನ ಹಾಗೂ ಅಪೌಷ್ಟಿಕತೆ ಕಾಡುತ್ತಿದ್ದು, ಅದರ ನಿವಾರಣೆಗೆ ಯಾವುದೇ ಕ್ರಮವಹಿಸದ ನರೇಂದ್ರ ಮೋದಿ ಅವರು ಜನರನ್ನಷ್ಟೇ ಅಲ್ಲ ಸಂವಿಧಾನವನ್ನೂ ಸಮಾಧಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ. ಅದನ್ನು ಸರ್ಕಾರದ ವರದಿಯೇ ಹೇಳಿದೆ. ಮೋದಿ ಅವರು ಜನರ ಬಡತನ ಹೋಗಲಾಡಿಸಲು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ಬದಲು ಕಾಂಗ್ರೆಸ್ ನನ್ನನ್ನು ಸಮಾಧಿ ಮಾಡುತ್ತಿದೆ. ಕರ್ನಾಟಕದ ಜನರು ನನ್ನನ್ನು ಕಾಪಾಡಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಪ್ರವಾಹವಾದಾಗ ಕನ್ನಡಿಗರ ಸಂಕಷ್ಟ ಕೇಳಲು ಮೋದಿ ಬರಲಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ, ಬೆಳಗಾವಿಯಲ್ಲಿ ಮಹಾರಾಷ್ಟ್ರದ ಕಿಡಿಗೇಡಿಗಳು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಲು ಹೊರಟಾಗ, ಕನಿಷ್ಠ ಸೌಜನ್ಯದ ಹೇಳಿಕೆಯನ್ನೂ ನೀಡಲಿಲ್ಲ. ಇದೀಗ ನಿಮಗೆ ಕನ್ನಡಿಗರ ಮತ ಬೇಕೆ? ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ, ನಮ್ಮ ಪಾಲಿನ ನೀರಿನ ಬಳಕೆಗೆ ಯಾವ ಅನುಕೂಲ ಮಾಡಿಕೊಟ್ಟಿದ್ದೀರಿ? ಮೇಕೆದಾಟು, ಮಹಾದಾಯಿ ಕೆಲಸ ಆರಂಭಿಸಿದ್ದೀರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹಲವು ಭಾಗ್ಯ ಕೊಟ್ಟರೂ, ಎಲ್ಲ ಸಮುದಾಯಗಳಿಗೆ ಯೋಜನೆಗಳು ನೀಡಿದ್ದರೂ, ಮುಸ್ಲಿಂ ಸಮುದಾಯದ ಶೇ 89ರಷ್ಟು ಮತಗಳನ್ನು ಪಡೆದರೂ, ಕಳೆದ ಬಾರಿ ಬಹುಮತ ಬರಲಿಲ್ಲ. ಈ ಬಾರಿ ಮತ್ತಷ್ಟು ಕುಸಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಂಚರತ್ನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದೇ ಗುರಿ. ಸಮಾರೋಪಕ್ಕೆ ರಾಜ್ಯ 31 ಜಿಲ್ಲೆಗಳಿಂದ 8 ಲಕ್ಷಕ್ಕೂ ಹೆಚ್ಚು ಮಂದಿ ಬಂದಿದ್ದರು. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಚಾಲಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.
ಪಂಚರತ್ನ ಯಾತ್ರೆ ಏಪ್ರಿಲ್ 10 ರವರೆಗೂ ಮುಂದುವರಿಯಲಿದೆ. ಮಾರ್ಚ್ 28ರಿಂದ ಬೆಂಗಳೂರಿನ ಯಶವಂತಪುರ, ಗೋವಿಂದರಾಜ, ಬಸವನಗುಡಿ, ಯಲಹಂಕ ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರದ ಎಲ್ಲ ತಾಲ್ಲೂಕುಗಳಲ್ಲೂ ಯಾತ್ರೆ ನಡೆಯಲಿದೆ ಎಂದೂ ತಿಳಿಸಿದರು.
ಮುಸ್ಲಿಮರ ಮೀಸಲಾತಿ ತೆಗೆದಿರುವುದು ಬಿಜೆಪಿ ಒಡೆದು ಆಳುವ ನೀತಿಯಾಗಿದೆ. ಮೀಸಲಾತಿ ರದ್ದತಿಯಿಂದ ಮುಸ್ಲಿಮರು ಬೀದಿಗಿಳಿದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟರೆ, ಒಕ್ಕಲಿಗರು ಹಾಗೂ ಲಿಂಗಾಯಿತರ ಮತ ಪಡೆಯಬಹುದು. ಬೆಂಕಿ ಹಚ್ಚುವ ಕೆಲಸ ಮಾಡಬೇಕೆಂಬುದೇ ಬಿಜೆಪಿಗರ ಉದ್ದೇಶವಾಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಯಾವುದೇ ಆಯೋಗ ರಚಿಸದೇ, ಸಲಹೆ ಪಡೆಯದೇ ಅವೈಜ್ಞಾನಿಕವಾಗಿ ಮುಸ್ಲಿಮರ ಮೀಸಲಾತಿಯನ್ನು ತರಾತುರಿಯಲ್ಲಿ ತೆಗೆದು ಹಾಕಿರುವುದು ಸರಿಯಲ್ಲ. ಸರ್ಕಾರದ ಮಕ್ಕಳಾಟಿಕೆಯಿದು ಎಂದರು.
ಲಿಂಗಾಯತರು ಹಾಗೂ ಒಕ್ಕಲಿಗರ ಕಿವಿಗೆ ಹೂ ಮುಡಿಸಲು ಹೊರಟಿದ್ದಾರೆ. ವಾರದಲ್ಲಿ ಚುನಾವಣೆ ಘೋಷಣೆಯಾಗಲಿದೆ. ಬಿಜೆಪಿಯ ಮೀಸಲಾತಿ ಘೋಷಣೆಯು ಕಾರ್ಯರೂಪಕ್ಕೆ ಬರುವುದಿಲ್ಲ ಎಂದರು.
ಶಾಸಕರಾದ ಜಿ.ಟಿ.ದೇವೇಗೌಡ. ಸಾ.ರಾ.ಮಹೇಶ್, ಅಶ್ವಿನ್ ಕುಮಾರ್ ಸೇರಿದಂತೆ ಹಲವರು ಇದ್ದರು.