ಮೈಸೂರು: ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೀತಿಯ ಗುದ್ದನ್ನು ಪಡೆದಿದ್ದ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಬಿಜೆಪಿ ಟಿಕೆಟ್ ನಿಂದ ವಂಚಿತರಾಗಿದ್ದಾರೆ. ಕೊನೆಗಳಿಗೆಯಲ್ಲಿ ಅವರ ಬದಲಿಗೆ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಅವರಿಗೆ ಟಿಕೆಟ್ ದೊರೆತಿದೆ.
ಮತ್ತೊಮ್ಮೆ ಕ್ಷೇತ್ರದ ಶಾಸಕರಾಗುವ ಕನಸು ಕಾಣುತ್ತಿದ್ದ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದ್ದು, ನಗರಾಧ್ಯಕ್ಷ ಶ್ರೀವತ್ಸ ಅವರಿಗೆ ಅದೃಷ್ಟ ಒಲಿದು ಬಂದಿದೆ. ಮೊದಲ ಎರಡು ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆಯಾಗದೆ ಇದ್ದುದರಿಂದ ಟಿಕೆಟ್ ಯಾರಿಗೆ ನೀಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಈ ನಡುವೆ ಇದು ನನ್ನ ಕೊನೆಯ ಚುನಾವಣೆ, ಇದೊಂದು ಬಾರಿ ಅವಕಾಶ ಕೊಡಿ ಎಂದು ರಾಮದಾಸ್ ಮಾಡಿಕೊಂಡಿದ್ದ ಮನವಿಗೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕ ಹೊಂದಿದ್ದರಿಂದ ರಾಮದಾಸ್ ಅವರಿಗೆ ಟಿಕೆಟ್ ದೊರೆಯುತ್ತದೆ ಎಂದು ಭಾವಿಸಲಾಗಿತ್ತು, ಆದರೆ, ಎರಡು ಪಟ್ಟಿಗಳಲ್ಲೂ ರಾಮದಾಸ್ ಹೆಸರಿಲ್ಲದಿದ್ದರಿಂದ ಅವರಿಗೆ ಟಿಕೆಟ್ ದೊರೆಯುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಸುದ್ದಿ ಮೂರನೇ ಪಟ್ಟಿಯಲ್ಲಿ ನಿಜವಾಗಿದೆ.
ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಹೊಸ ಮುಖಕ್ಕೆ ಹೈ ಕಮಾಂಡ್ ಅಸ್ತು ಎಂದಿದೆ. ಶ್ರೀವತ್ಸ ಮೊದಲ ಬಾರಿಗೆ ಟಿಕೆಟ್ ಪಡೆದಿದ್ದು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಎಸ್.ಎ.ರಾಮದಾಸ್ 4 ಬಾರಿ ಆಯ್ಕೆಯಾಗಿ 5ನೇ ಬಾರಿಗೆ ಆಯ್ಕೆಯಾಗಲು ಟಿಕೆಟ್ ಬಯಸಿದ್ದರು. ಶಾಸಕರಾಗಿ, ಸಚಿವರಾಗಿ ಅಪಾರ ಅನುಭವ ಹೊಂದಿರುವ ರಾಮದಾಸ್ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 2009ರಿಂದ 2011ರವರೆಗೆ ರಾಜಕೀಯ ಕಾರ್ಯದರ್ಶಿ ಆಗಿದ್ದರು. 2011ರಿಂದ 2013ರವರೆಗೆ ವೈದ್ಯಕೀಯ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿಯೂ ಆಗಿದ್ದರು. 1994, 1999, 2008 ಹಾಗೂ 2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
2004, 2013ರ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಕಡೆಯ ಚುನಾವಣೆ ಎಂದು ಘೋಷಣೆ ಮಾಡಿದ್ದರು. ಆದರೆ, ಅಂತಿಮವಾಗಿ ಪಕ್ಷ ಶ್ರೀವತ್ಸ ಅವರಿಗೆ ಮಣೆ ಹಾಕಿದೆ. ಶಾಸಕ ರಾಮದಾಸ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಕ್ಷೇತ್ರವನ್ನು ಮಾದರಿಯಾಗಿಸಲು ಶ್ರಮಿಸಿದ್ದರು. ಮೋದಿ ಯುಗ ಉತ್ಸವದ ಮೂಲಕ ಸರ್ಕಾರಿ ಯೋಜನೆಗಳನ್ನು ಕ್ಷೇತ್ರದ ಜನತೆಗೆ ತಲುಪಿಸುತ್ತಿದ್ದರು. ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ರಾಮದಾಸ್ ಅವರ ಕಾರ್ಯವೈಖರಿ ಮೆಚ್ಚಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಪ್ರೀತಿಯ ಗುದ್ದು ಕೊಟ್ಟಿದ್ದರು. ಆದರೆ, ಆ ಪ್ರೀತಿಯ ಗುದ್ದಿಗೇ ಬೆಲೆ ಇಲ್ಲದಂತಾಗಿದೆ. ಸ್ವಪಕ್ಷೀಯರು, ಸ್ವಜಾತಿಯವರ ವಿರೋಧ ಟಿಕೆಟ್ ಕೈತಪ್ಪುವಲ್ಲಿ ಪ್ರಮುಖ ಪಾತ್ರವಹಿಸಿದೆ.