ಮೈಸೂರು: ಬಿಜೆಪಿಯ ವರುಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರು ಕೋಟಿ ಒಡೆಯರಾಗಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆದಾಯ ವಿವರ ನೀಡಿದ್ದಾರೆ. ಸ್ಥಿರಾಸ್ತಿ 10.21 ಕೋಟಿ ಹಾಗೂ ಚರಾಸ್ತಿ 3.61 ಕೋಟಿ ಇದ್ದು, ಬ್ಯಾಂಕ್ ಸಾಲ 2.9 ಕೋಟಿ ಇದೆ. ಸೋಮಣ್ಣ ಅವರ 2022ರ ವಾರ್ಷಿಕ ಆದಾಯ 42.28 ಲಕ್ಷ. ಪತ್ನಿ ಶೈಲಜಾ ಅವರ ವಾರ್ಷಿಕ ಆದಾಯ 54.8 ಲಕ್ಷ ಇದ್ದು, ಸ್ಥಿರಾಸ್ತಿ 21.4 ಕೋಟಿ ಇದ್ದರೆ, ಚರಾಸ್ತಿ 13.01 ಕೋಟಿ ಇದೆ. ಸೋಮಣ್ಣ ಅವರ ಕೈಯಲ್ಲಿರುವ ನಗದು 4.01 ಲಕ್ಷ. 32.48 ಲಕ್ಷ ಮೌಲ್ಯದ ಎರಡು ಟೊಯೊಟಾ ಕಾರುಗಳಿವೆ. ಶೈಲಜಾ ಅವರಲ್ಲಿ 9.99 ಲಕ್ಷ ಹಣವಿದೆ, 11.85 ಲಕ್ಷ ಮೌಲ್ಯದ ಇನ್ನೊವಾ ಕಾರು ಇದೆ.
10.35 ಲಕ್ಷ ಮೌಲ್ಯದ ಚಿನ್ನಾಭರಣವಿದ್ದರೆ, ಪತ್ನಿ ಶೈಲಜಾ ಬಳಿ 1.01 ಕೋಟಿ ಚಿನ್ನಾಭರಣವಿದೆ. ಸೋಮಣ್ಣ ಅವರ ಕ್ಲೇಮುಗಳು ಹಾಗೂ ಇತರೆ ಸ್ವತ್ತುಗಳ ಮೌಲ್ಯ 3.61 ಕೋಟಿಯಾದರೆ, ಪತ್ನಿ ಅವರದ್ದು 13.01 ಕೋಟಿ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಸಾಪುರದಲ್ಲಿ 10 ಎಕರೆ 35 ಗುಂಟೆ ಕಾಫಿ ತೋಟವಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರಕೆರೆಯಲ್ಲಿ 18 ಕೋಟಿ ಮೌಲ್ಯದ 16 ಎಕರೆ 6 ಗುಂಟೆ ಕೃಷಿ ಭೂಮಿ ಪತ್ನಿ ಹೆಸರಿನಲ್ಲಿದೆ.
ಬೆಂಗಳೂರಿನ ವಿಜಯನಗರ ಹಾಗೂ ಎಂಆರ್‌ಸಿಆರ್ ಬಡಾವಣೆಯಲ್ಲಿ 7.21 ಕೋಟಿ ಮೌಲ್ಯದ ವಸತಿ ಕಟ್ಟಡವಿದ್ದು, ಪತ್ನಿ ಅವರ ಬಳಿ ಕೆಂಗೇರಿ, ಕನ್ನಹಳ್ಳಿಯಲ್ಲಿ 3.4 ಕೋಟಿ ವಸತಿ ಕಟ್ಟಡಗಳಿವೆ. ಅವರಿಗೆ 4.53 ಕೋಟಿ ಬ್ಯಾಂಕ್ ಸಾಲವೂ ಇದೆ.
2018ರ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಸೋಮಣ್ಣ ಅವರ ಸ್ಥಿರಾಸ್ತಿ 4.6 ಕೋಟಿ ಇದ್ದರೆ, ಚರಾಸ್ತಿಯು 4.28 ಕೋಟಿ ಇತ್ತು. ಐದು ವರ್ಷದಲ್ಲಿ ಸ್ಥಿರಾಸ್ತಿಯು 10.21 ಕೋಟಿಗೇರಿದ್ದರೆ, ಚರಾಸ್ತಿ 3.61 ಕೋಟಿಗೆ ಇಳಿಕೆಯಾಗಿದೆ.