ಮೈಸೂರು: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಿಂದಾಗಿ ಇಡೀ ದೇಶದ ಜನರು ಆತಂಕದಲ್ಲಿದ್ದಾರೆ. ಜನವಸತಿ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಯುತ್ತಿದೆ ಎಂದು ವರದಿಗಳು ಹೇಳಿವೆ. ದಾವಣಗೆರೆ ಜಿಲ್ಲೆಯ ಐದು ಜನರು ಸೇರಿದಂತೆ ಕರ್ನಾಟಕದ ಒಟ್ಟು 31 ಜನರು ಸುಡಾನ್‌ನ ಅಲ್ಫಾಶೀರ್ ನಗರದಲ್ಲಿ ಸಿಲುಕಿಕೊಂಡಿದ್ದಾರೆ.
ಕನ್ನಡಿಗರು ತಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಆ ಪ್ರದೇಶಗಳಲ್ಲಿ ಎದುರಿಸುತ್ತಿರುವ ವಿಷಮ ಪರಿಸ್ಥಿತಿಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾರೆ. ಭಾರತೀಯರು ವಾಸಿಸುವ ಮನೆಗಳ ಮೇಲೆ ಗುಂಡಿನ ದಾಳಿ ಕೂಡ ನಡೆರುವುದನ್ನು ಇಲ್ಲಿ ಗಮನಿಸಬಹುದು.
ಸೂಡಾನ್‌ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕದ ಜನರಿಗೆ ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಸಹಾಯದ ಅವಶ್ಯಕತೆಯಿದೆ. ಈ ಕನ್ನಡಿಗರಲ್ಲಿ ಹೆಚ್ಚಿನವರು ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಕರ್ನಾಟಕದ 31 ಜನರಲ್ಲಿ ಏಳು ಮಂದಿ ಶಿವಮೊಗ್ಗದವರು, ಐದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹತ್ತೊಂಬತ್ತು ಮಂದಿ ಮೈಸೂರು ಜಿಲ್ಲೆಯ ಹುಣಸೂರಿನವರಾಗಿದ್ದಾರೆ.
ಸಂತ್ರಸ್ತರು ತಮ್ಮ ಸಂಕಟವನ್ನು ವೀಡಿಯೊದಲ್ಲಿ ಆಹಾರ, ನೀರಿನ ಕೊರತೆಯನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರು ವಾಸವಿದ್ದ ಕಟ್ಟಡದ ಮೇಲೂ ಗುಂಡಿನ ದಾಳಿ ನಡೆದಿದ್ದು, ಜನರು ಭಯ, ಆತಂಕದಲ್ಲಿ ಬದುಕುವಂತಾಗಿದೆ.
ಸುಡಾನ್‌ನಲ್ಲಿ ಸಿಲುಕಿರುವ 31 ಕನ್ನಡಿಗರಲ್ಲಿ ಹೆಚ್ಚಿನವರು ಗಿಡಮೂಲಿಕೆ ಔಷಧಿ ಮಾರಾಟ ಮಾಡಲು ಮತ್ತು ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅಲ್ಲಿಗೆ ಹೋಗಿದ್ದರು ಎಂದು ತಿಳಿದುಬಂದಿದೆ. ವಿಮಾನ ನಿಲ್ದಾಣ, ದೊಡ್ಡ ನಗರಗಳು ನಾಶವಾಗಿವೆ. ಸಂಕಷ್ಟದಲ್ಲಿ ಸಿಕ್ಕಿಬಿದ್ದಿರುವ ಜನರನ್ನು ಮರಳಿ ಸ್ವದೇಶಕ್ಕೆ ಕರೆತರಬೇಕೆಂಬ ಒತ್ತಾಯ ಕೇಳಿಬಂದಿದೆ.