ಮೈಸೂರು: ಬಿಜೆಪಿ ಟಿಕೆಟ್ ವಂಚಿತ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ನೇತೃತ್ವದಲ್ಲಿ ಮೇಯರ್ ಶಿವಕುಮಾರ್ ಮತ್ತು ಸ್ಥಳೀಯ ಕಾರ್ಯಕರ್ತರೊಂದಿಗೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಅವರ ಪರವಾಗಿ ಕುವೆಂಪುನಗರದಲ್ಲಿ ಮತ ಪ್ರಚಾರ ನಡೆಸಿದ್ದಾರೆ.
ವಾರ್ಡ್ ನಂ. 47ರ ಕುವೆಂಪುನಗರದ ಸುಮಸೋಪಾನ ಉದ್ಯಾನವನದಿಂದ ಪ್ರಚಾರ ಕೈಗೊಂಡು ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಆಗಿರುವ ಅಭಿವೃದ್ಧಿ ಮತ್ತು ವಾರ್ಡಿನ ಮಟ್ಟದಲ್ಲಿ ಆಗಿರುವ ಅಭಿವೃದ್ಧಿ ವಿಷಯ ತಿಳಿಸಿ ಉದ್ಯಾನವದಲ್ಲಿ ವಾಕಿಂಗ್ ಮಾಡುತ್ತಿರುವವರೊಂದಿಗೆ, ಸುತ್ತಮುತ್ತಲಿನ ಅಂಗಡಿಗಳು, ಹೋಟೆಲ್, ಬಸ್ ನಿಲ್ದಾಣ, ಆಟೋ ನಿಲ್ದಾಣ ಹಾಗೂ ಈ ಭಾಗದ ಮನೆಗಳಿಗೆ ತೆರಳಿ ಮತ ಪ್ರಚಾರ ಮಾಡಲಾಯಿತು.
ಈ ಹಿಂದೆ ಸ್ಥಳೀಯ ನಿವಾಸಿಗಳು ಬೇಡಿಕೆ ಇಟ್ಟಿದ್ದ ಹಲವು ಕಾಮಗಾರಿಗಳಿಗೆ ಈಗಾಗಲೇ ಶಾಸಕರ ಅನುದಾನದ ಅಡಿಯಲ್ಲಿ ಅನುದಾನ ನೀಡಿದ್ದು ಇದರ ಟೆಂಡರ್ ಪ್ರಕ್ರಿಯೆ ಮುಗಿದಿರುತ್ತದೆ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳನ್ನು ಮನಗಂಡು ಈ ಬಾರಿ ಬಿಜೆಪಿಗೆ ಮತ ನೀಡುವಂತೆ ನಿವಾಸಿಗಳಲ್ಲಿ ಮನವಿ ಮಾಡಿದರು.
ಧರ್ಮ-ಅಧರ್ಮದ ನಡುವೆ ಇಂದು ಕುರುಕ್ಷೇತ್ರ ನಡೆಯುತ್ತಿದೆ. ಧರ್ಮದ ಹಾದಿಯಲ್ಲಿ ಸಾಗುವುದು ಇಂದು ಬಹಳ ಕಷ್ಟವಾಗಿದೆ. ನೋವು-ನಲಿವು, ಕಷ್ಟಗಳನ್ನು ಸಹಿಸಿಕೊಂಡು ನಡೆಯಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.
ಕಷ್ಟ ಎಂಬುದು ಬಸವಣ್ಣನವರನ್ನೇ ಬಿಡಲಿಲ್ಲ. ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಯಿತು. ಇದು ಬಸವಣ್ಣನವರ ಬದುಕಿನ ಹಾದಿ ಕಲ್ಲು, ಮುಳ್ಳುಗಳನ್ನು ಸೃಷ್ಟಿಸಿತ್ತು ಎಂದು ಹೇಳಿದರು. ಬ್ರಾಹ್ಮಣ ಸಮಾಜದಿಂದ ಬಂದವರಾದರೂ ಸಮಾಜದ ಸುಧಾರಣೆಗಾಗಿ ಪರಿವರ್ತನೆಗೊಂಡ ಮಹಾನ್ ಸುಧಾರಕ ಹಾಗೂ ಚೇತನ ಎಂದು ಬಣ್ಣಿಸಿದರು.
ಈ ವೇಳೆ ಮೇಯರ್ ಶಿವಕುಮಾರ್, ಬೂತ್ ಅಧ್ಯಕ್ಷೆ ಶೋಭಾ ಮತ್ತಿತರರು ಉಪಸ್ಥಿತರಿದ್ದರು.