ಪಿರಿಯಾಪಟ್ಟಣ: ತಾಲೂಕಿನ ಹಲವೆಡೆ ಗುರುವಾರ ಮಧ್ಯಾಹ್ನ ಬಿದ್ದ ಬಿರುಗಾಳಿ ಸಹಿತ ಭಾರೀ ಮಳೆಗೆ ಓರ್ವ ಮಹಿಳೆ ಮೃತಪಟ್ಟು ಹಲವೆಡೆ ವಿದ್ಯುತ್ ಕಂಬ ಹಾಗೂ ಮರಗಳು ರಸ್ತೆ ಮೇಲೆ ಬಿದ್ದು ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಶೋಭಾ(42) ಮಳೆ ಗೆ ಬಲಿಯಾಗಿದ್ದಾರೆ, ಇವರು ಮಳೆ ಸುರಿದ ವೇಳೆ ಆಸರೆ ಪಡೆಯಲು ನಿಂತಿದ್ದ ಟ್ರ್ಯಾಕ್ಟರ್ ಶೆಡ್ ನ ಮೇಲ್ಛಾವಣಿಯ ಶೀಟ್ ಬಿರುಗಾಳಿಗೆ ಹಾರಿ ಛಾವಣಿ ಕುಸಿದು ಬಿದ್ದಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆರಕ್ಷಕ ಇಲಾಖೆ ಸಿಬ್ಬಂದಿಯೊಂದಿಗೆ ಕಂದಾಯ ಇಲಾಖೆ ಶಿರಸ್ತೇದಾರ್ ನಂದಕುಮಾರ್ ಕಂದಾಯಾಧಿಕಾರಿ ಶ್ರೀಧರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಪರಿಹಾರಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.
ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮ ಬಳಿ ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಮರ ರಸ್ತೆಗುರುಳಿದ ಪರಿಣಾಮ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರಕ್ಕೆ ತೊಂದರೆಯಾಗಿ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು ರಸ್ತೆಯಲ್ಲಿ ಬಿದ್ದ ಮರ ತೆರವು ಮಾಡಿ ನಂತರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಗುರುವಾರ ಮಧ್ಯಾಹ್ನ ಬಿರುಗಾಳಿ ಆರ್ಭಟ ಹೆಚ್ಚಾಗಿ ಮಳೆ ಬಿದ್ದ ಸಂದರ್ಭ ಕಂದೇಗಾಲ ತೆಲಗಿನಕುಪ್ಪೆ ಕೋಮಲಾಪುರ ಬೆಕ್ಕರೆ ಬೆಟ್ಟೆಗೌಡನಕೊಪ್ಪಲು ಕೊಣಸೂರು ತಿಮಕಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬ ಹಾಗೂ ಭಾರಿ ಗಾತ್ರದ ಮರಗಳು ರಸ್ತೆ ಮೇಲೆ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆ ಉಂಟಾಗಿ ಸಾರಿಗೆ ಸೇರಿದಂತೆ ಇತರೆ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಿದವು.
ಹಲವು ಗ್ರಾಮಗಳಲ್ಲಿ ದನದ ಕೊಟ್ಟಿಗೆ ಹಾಗೂ ರೇಷ್ಮೆ ಶೆಡ್ ಚಾವಣಿ ಹಾರಿ ಅಪಾರ ಪ್ರಮಾಣದ ಹಾನಿ ಉಂಟಾಗಿ ರೈತರಿಗೆ ನಷ್ಟ ಉಂಟಾಗಿದೆ, ಕಟಾವಿಗೆ ಬಂದಿದ್ದ ಮಾವು ಬೆಳೆ ಬಿರುಗಾಳಿ ಆರ್ಭಟಕ್ಕೆ ನಾಶವಾದ ವರದಿಯಾಗಿದೆ. ವಿದ್ಯುತ್ ಕಂಬ ಧರೆಗುರುಳಿದ ಪರಿಣಾಮ ತಕ್ಷಣ ಎಚ್ಚೆತ್ತ ಸೆಸ್ಕ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಸೆಸ್ಕ್ ಬೆಟ್ಟದಪುರ ಉಪ ವಿಭಾಗದ ಎಇಇ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ಮಳೆಯಿಂದ ಒಂದೆಡೆ ರೈತರು ಹರ್ಷವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಮತ್ತೊಂದೆಡೆ ಅಪಾರ ಪ್ರಮಾಣದ ಹಾನಿಯಾದ ವರದಿಯಾಗಿದೆ.